ಅಂಬೇಡ್ಕರ್ ಯುವ ಸೇವೆಯ ಕಾಪು ತಾಲೂಕು ಸಮಿತಿ ಉದ್ಘಾಟನೆ

Update: 2020-10-04 11:56 GMT

ಪಡುಬಿದ್ರಿ: ದೇವಳ, ದೈವಸ್ಥಾನ ನಿರ್ಮಿಸುವ ಬದಲು ಗ್ರಂಥಾಲಯ ಆರಂಭಿಬೇಕಾಗಿದೆ. ಈ ಮೂಲಕ ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಉಡುಪಿ ಸಮಾಜ ಕಲ್ಯಾಣ ಇಲಾಖಾ ಉಪನಿರ್ದೇಶಕ ಪ್ರೇಮ್ ಸಾಗರ್ ದಂಡೇಕರ್ ಹೇಳಿದರು. 

ಅವರು ರವಿವಾರ ಪಡುಬಿದ್ರಿಯಲ್ಲಿ ಉಡುಪಿ ಅಂಬೇಡ್ಕರ್ ಯುವಸೇವೆಯ ಕಾಪು ತಾಲೂಕು ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ನೂತನ ತಾಲೂಕು ಸಮಿತಿಯನ್ನು ಭೀಮ ಜ್ಯೋತಿ ಬೆಳಗಿಸಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ದಲಿತ ಸಂಘಟನೆಗಳು ಸಮಾಜ ಮುಖಿ ಚಿಂತನೆಯೊಂದಿಗೆ ವೈಚಾರಿಕತೆ-ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕಾಗಿದೆ. ಸಂಘಟನೆಗಳು ಸಮಾಜದ ಒಳಿತಿಗಾಗಿ ಸಂಘಟನೆ ಕೆಲಸ ಮಾಡಬೇಕಾಗಿದೆ ಎಂದ ಅವರು, ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಸಮಗ್ರ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿನಂತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿಯ ದಲಿತ ಚಿಂತಕ ಜಯನ್ ಮಲ್ಪೆ, ಅನ್ಯಾಕ್ಕೊಳಗಾದವರಿಗೆ, ಶೋಷಣೆಗೊಳಗಾದವರಿಗೆ ನ್ಯಾಯ ಒದಗಿಸುವ ಸಂಸ್ಥೆಯಾಗಿ ಹಾಗೂ ಸಮಾಜದ ರಕ್ಷಣೆಗೆ ಕಟಿಬದ್ಧವಾಗಿ ಯುವಸೇವೆ ಕಾರ್ಯಾಚರಿಸಲಿದೆ. ಅಂಬೇಡ್ಕರ್ ಸಂವಿಧಾನದಿಂದ ನ್ಯಾಯ ಸಿಕ್ಕಿದೆ. ಅವರ ತತ್ವ ಸಿದ್ಧಾಂತಗಳನ್ನು ಕಟ್ಟಿ ಚಳುವಳಿಯಾಗಿ ಸಂಸ್ಥೆಯನ್ನು ಕಟ್ಟಿಬೆಳೆಸುತ್ತೇನೆ ಎಂದರು.

ನಿರ್ಭಯಾ ಪ್ರಕರಣದ ಅರೋಪಿಗಳಿಗೆ ನೀಡಿದಂತಹ ಶಿಕ್ಷೆಯನ್ನೇ ಮನಿಷಾ ವಾಲ್ಮೀಕಿ ಪ್ರಕರಣದ ಆರೋಪಿಗಳಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕಾಪು ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಪದಸ್ವೀಕಾರಗೈದ ಲೋಕೇಶ್ ಪಡುಬಿದ್ರಿ ಒತ್ತಾಯಿಸಿದರು.

ಸನ್ಮಾನ: ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ರೋಶ್ನಿಯವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಅಂಬೇಡ್ಕರ್ ಯುವಸೇವೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಯುವ ಉದ್ಯಮಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ತಾಪಂ ಮಾಜಿ ಸದಸ್ಯ ನವೀನ್‍ಚಂದ್ರ ಜೆ.ಶೆಟ್ಟಿ, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಕೇಶವ ಸಾಲ್ಯಾನ್ ಹೆಜ್ಮಾಡಿ, ತಾಪಂ ಮಾಜಿ ಸದಸ್ಯ ಭಾಸ್ಕರ್ ಪಡುಬಿದ್ರಿ, ದಲಿತ ಮುಖಂಡ ರಮೇಶ್‍ಪಾಲ್, ಕಾಪು ತಾಲೂಕು ಸಮಿತಿಯ ಮಹಿಳಾ ಸಮಿತಿಯ ಅಧ್ಯಕ್ಷೆ ರಾಜೀವಿ ವಸಂತ ಮುಖ್ಯ ಅತಿಥಿಗಳಾಗಿದ್ದರು.

ಕಾಪು ತಾಲೂಕು ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಬಂಗೇರ ಸ್ವಾಗತಿಸಿದರು. ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ವಸಂತ ಪಾದೆಬೆಟ್ಟು ವಂದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News