×
Ad

​ಮೀನುಗಾರರ ನೆರವಿಗೆ ‘ಫಿಶರ್ ಫ್ರೆಂಡ್’ ಮೊಬೈಲ್ ಅಪ್ಲಿಕೇಶನ್

Update: 2020-10-04 17:35 IST
ಸಾಂದರ್ಭಿಕ ಚಿತ್ರ

ಮಂಗಳೂರು, ಅ.4: ಮೀನುಗಾರರ ಸುರಕ್ಷತೆಯ ನಿಟ್ಟಿನಲ್ಲಿ ಮತ್ತು ಮೀನುಗಾರಿಕಾ ವಲಯದ ಮಾಹಿತಿ ವಿನಿಮಯ ಮಾಡುವ ಸಲುವಾಗಿ ‘‘ಮೀನುಗಾರ ಸ್ನೇಹಿ ಮೊಬೈಲ್ ಅಪ್ಲಿಕೇಶನ್’ (ಫಿಶರ್ ಫ್ರೆಂಡ್ ಮೊಬೈಲ್ ಅಪ್ಲಿಕೇಶನ್’ (ಎಫ್‌ಎಫ್‌ಎಂಎ) ನ್ನು ಅಭಿವೃದ್ದಿಪಡಿಸಲಾಗಿದೆ.

ಇದು ಮೀನುಗಾರರಿಗೆ ಹವಾಮಾನ, ಸಮಯದ ಪರಿಜ್ಞಾನ ಮತ್ತು ಮಾಹಿತಿ ಸೇವೆಗಳಿಗೆ ತಯಾರಿಸಲಾದ ಏಕ ವಿಂಡೋ ಪರಿಹಾರ ವ್ಯವಸ್ಥೆಯಾಗಿದೆ. ಸಮುದ್ರದ ತಕ್ಷಣದ ಸ್ಥಿತಿಗತಿ ಅಥವಾ ಮುನ್ಸೂಚನೆಗಳು ಮತ್ತು ಮಾರುಕಟ್ಟೆ ಸಂಬಂಧಿತ ಮಾಹಿತಿಯನ್ನೂ ಇದು ಒದಗಿಸುತ್ತದೆ. ಇದರಿಂದ ಮೀನುಗಾರರ ವೈಯುಕ್ತಿಕ ಸುರಕ್ಷತೆ ಮತ್ತು ಬೋಟುಗಳ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ವೈರ್‌ಲೆಸ್ ರೀಚ್ ಕ್ವಾಲ್ಕಮ್‌ನ ಸಹಭಾಗಿತ್ವದಲ್ಲಿ ಅಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಕನ್ನಡ, ಇಂಗ್ಲಿಷ್, ತುಳು, ತೆಲುಗು, ಒಡಿಯಾ, ಬಂಗಾಳಿ, ಮಲಯಾಳಂ, ಮರಾಠಿ, ಗುಜರಾತಿ ಭಾಷೆಗಳಲ್ಲಿ ಸದ್ಯ ಲಭ್ಯವಿದೆ.

ಸಮುದ್ರ ಮೀನುಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ (ಐಸಿಎಆರ್) ಮತ್ತು ಕೇಂದ್ರಿಯ ಮೀನುಗಾರಿಕೆ ಸಂಶೋಧನಾ ಕೇಂದ್ರವು (ಸಿಎಂಎಫ್‌ಆರ್‌ಐ) ದೇಶದ ಪ್ರಮುಖ ರಾಷ್ಟ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯಾಗಿದೆ. ಈ ಸಂಸ್ಥೆಯು ಮೀನುಗಾರರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಸುಸ್ಥಿರ ಮೀನುಗಾರಿಕೆ ವಿಧಾನಗಳ ಕುರಿತಂತೆ ಸಲಹೆಗಳನ್ನು ಕಾಲಕಾಲಕ್ಕೆ ಮೀನುಗಾರರಿಗೆ ಒದಗಿಸುತ್ತಿದೆ. ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಪೌಂಡೇಶನ್ (ಎಂ.ಎಸ್.ಎಸ್.ಆರ್.ಎಫ್) ವತಿಯಿಂದ ಅಭಿವೃದ್ಧಿಪಡಿಸಲಾದ ಎಫ್‌ಎಫ್‌ಎಂಎ ಅಪ್ಲಿಕೇಶನ್ ಉಪಯೋಗದಿಂದ ಮಂಗಳೂರು ಸಂಶೋಧನಾ ಕೇಂದ್ರವು ಎಂಎಸ್‌ಎಸ್‌ಆರ್‌ಎಫ್ ಜೊತೆಗೂಡಿ ಸಾಗರಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪ್ರಸಾರ ಮಾಡುತ್ತಿದೆ.

ಸದ್ಯದ ಮೀನುಗಾರಿಕೆ ವ್ಯವಸ್ಥೆಯಿಂದ ಮೀನುಗಾರರಲ್ಲಿ ಅಭದ್ರತೆ ಸೃಷ್ಟಿಸಿದೆ. ವಿವಿಧ ಮೀನುಗಾರಿಕಾ ಪದ್ಧತಿಗಳ ಹಾಗೂ ಅಂತರ ವಲಯಗಳಲ್ಲಿನ ವ್ಯವಸ್ಥೆಯು ಸ್ಪರ್ಧೆಗೆ ಎಡೆಮಾಡಿಕೊಡುವ ಮೂಲಕ ಸಾಗರ ಸಂಪನ್ಮೂಲಗಳು ಕ್ಷೀಣಿಸುತ್ತಿವೆ. ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿಯ ವೇಗವು ಈ ದುರ್ಬಲ ಸಮುದಾಯವನ್ನು ಮತ್ತಷ್ಟು ಅಪಾಯಕ್ಕೆ ದೂಡಿದೆ. ಈ ಮಧ್ಯೆ ಹೆಚ್ಚಿನ ಮೀನುಗಾರರು ಸಮುದ್ರದ ಬಗೆಗಿನ ಜ್ಞಾನ, ಹವಾಮಾನ ಬಗ್ಗೆ ಮಾಹಿತಿಯ ಕೊರತೆಯನ್ನು ಎದುರಿಸುತ್ತಿದ್ದಾರೆ.

ಅಂತಹವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತಯಾರಿಸಲಾದ ಆಂಡ್ರಾಯ್ಡಾ ಆಧಾರಿತ ಈ ಅಪ್ಲಿಕೇಶನ್‌ನಲ್ಲಿ ಸಾಂಪ್ರದಾಯಿಕ ಮತ್ತು ಯಾಂತ್ರೀಕೃತ ಮೀನುಗಾರಿಕೆಗೆ ಸಂಬಂಧಿಸಿದ ಮಾಹಿತಿ ಮತ್ತು ಜ್ಞಾನವನ್ನು ಸುಲಭವಾಗಿ ಪಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಎಫ್‌ಎಫ್‌ಎಂಎ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಿವಿಧ ಪಾಲುದಾರರಿಂದ ಅಪ್ಲಿಕೇಶನ್ ಅನ್ನು ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಟ್ಟಿವೆ. ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (ಇನ್‌ಕೋಯಿಸ್)ಭಾರತೀಯ ಕೋಸ್ಟ್‌ಗಾರ್ಡ್ ಮತ್ತು ಮೀನುಗಾರಿಕೆ ಇಲಾಖೆಯ ಸಹಭಾಗಿತ್ವವನ್ನೂ ಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News