ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಬೇಡಿಕೆ 3 ಪಟ್ಟು ಹೆಚ್ಚಳ
ಉಡುಪಿ, ಅ.4: ಕೋವಿಡ್-19 ಉಸಿರಾಟದ ಸಮಸ್ಯೆಯ ಕಾರಣಕ್ಕೆ ಆಮ್ಲಜನಕದ ಅವಶ್ಯಕತೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಬೇಡಿಕೆ ಮೂರು ಪಟ್ಟು ಹೆಚ್ಚಳವಾಗಿದೆ. ಈ ನಿಟ್ಟಿ ನಲ್ಲಿ ಎಲ್ಲ ರೀತಿಯ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅನು ಕೂಲವಾಗಲು ಜಿಲ್ಲಾಸ್ಪತ್ರೆಯಲ್ಲಿ 6000 ಲೀಟರ್ ಸಾಮರ್ಥ್ಯದ ದ್ರವ ಆಮ್ಲಜನಕ ಟ್ಯಾಂಕ್ ನಿರ್ಮಿಸಲಾಗಿದೆ.
6000 ಲೀಟರ್ ಅಂದರೆ 660 ಜಂಬೋ ಆಕ್ಸಿಜನ್ ಸಿಲಿಂಡರ್‌ಗೆ ಸಮಾನ ಆಗಿದೆ. ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಅವಶ್ಯಕತೆಯು ಅಲ್ಲಿ ದಾಖಲಾ ಗುವ ಕೋವಿಡ್ ಶಂಕಿತ ರೋಗಿಗಳ ಪರಿಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ರೋಗಿಗಳು ಹೆಚ್ಚಿದ್ದರೆ 40-50 ಜಂಬೋ ಸಿಲಿಂಡರ್‌ಗಳ ಅವಶ್ಯಕತೆ ಇರುತ್ತದೆ. ಇಲ್ಲದಿದ್ದರೆ 20 ಸಿಲಿಂಡರ್‌ಗಳು ಸಾಕಾಗುತ್ತದೆ.
ಜಿಲ್ಲಾಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ 600ಜಂಬೋ ಸಿಲಿಂಡರ್ ಬಳಕೆಯಾಗಿದೆ. ಕೋವಿಡ್-19 ಮೊದಲು ಜಿಲ್ಲಾಸ್ಪತ್ರೆಯಲ್ಲಿ 200 ಸಿಲಿಂಡರ್ ಬಳಕೆಯಾಗುತ್ತಿತ್ತು. ಈಗ ಇದರ ಮೂರು ಪಟ್ಟು ಬಳಕೆಯಾಗುತ್ತಿದೆ. ಈ ಟ್ಯಾಂಕ್ ನಿರ್ಮಾಣದಿಂದ ಆಕ್ಸಿಜನ್ ಸಂಬಂಧ ಹೊರೆ ಮತ್ತು ಕೆಲಸವೂ ಕಡಿಮೆಯಾಗಿದೆ. ಇಲ್ಲದಿದ್ದರೆ ಒಂದು ಸಿಲಿಂಡರ್ ಖಾಲಿಯಾಗುತ್ತಿದ್ದಂತೆ ಪ್ರತಿ ಬಾರಿಯೂ ಸಿಲಿಂಡರ್ ಆಳವಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್ ತಿಳಿಸಿದ್ದಾರೆ.
50ಲಕ್ಷ ರೂ. ವೆಚ್ಚದ ಕಾಮಗಾರಿ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಕ್ಸಿಜನ್ ಸಿಲಿಂಡರ್‌ಗಳು ಪೂರೈಕೆ ವಿಳಂಬವಾಗುತ್ತಿದ್ದು, ಇದನ್ನು ಮನಗಂಡು ಸರಕಾರ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲು ನಿರ್ದೇಶನ ನೀಡಿತ್ತು. ಅದರಂತೆ ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದ ಹಿಂಭಾಗದಲ್ಲಿ ರುವ ಜಾಗದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಈ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲಾಗಿದೆ.
ಈಗಾಗಲೇ ಟ್ಯಾಂಕ್ ಕಾಮಗಾರಿ ಪೂರ್ಣಗೊಂಡಿದ್ದು, ಬಳ್ಳಾರಿಯಿಂದ ತರಿಸಲಾದ 6000ಲೀಟರ್ ದ್ರವರೂಪದ ಆಮ್ಲಜನಕವನ್ನು ಅ.3ರಂದು ತುಂಬಿಸಲಾಗಿದೆ. ಈ ಟ್ಯಾಂಕ್‌ನಿಂದ ಆಮ್ಲಜನಕವನ್ನು ಪೈಪ್ ಮೂಲಕ ರೋಗಿಗಳಿಗೆ ಪೂರೈಕೆ ಮಾಡಲಾಗುತ್ತದೆ. ಹೀಗೆ ಇದರ ಪ್ರಾಯೋಗಿಕ ಬಳಕೆಗೆ ಜಿಲ್ಲಾಸ್ಪತ್ರೆ ಸಜ್ಜಾಗಿದೆ.
ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗುವ ಶಂಕಿತ ಕೊರೊನಾ ರೋಗಿ ಗಳಲ್ಲಿ ಉಸಿರಾಟ ಸಮಸ್ಯೆ ಹೆಚ್ಚು ಕಂಡುಬರುತ್ತಿರುವುದರಿಂದ ಆಮ್ಲಜನಕದ ಬೇಡಿಕೆಯಲ್ಲಿ ಏರಿಕೆ ಕಂಡಿದೆ. ಈ ತಿಂಗಳು ಬೇಡಿಕೆ ಹೆಚ್ಚಿದ್ದರೆ ಈಗಾಗಲೇ ತುಂಬಿಸಿರುವ 6000ಲೀಟರ್ ಆಕ್ಸಿಜನ್ ತಿಂಗಳೊಳಗೆ ಖಾಲಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್.
ಕೊರೋನ ಶ್ವಾಸಕೋಶ ಸಂಬಂಧಿಸಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತುಂಬಾ ಉಸಿರಾಟ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರ ಪರಿಣಾಮ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಅಪಾಯದ ಪರಿಸ್ಥಿತಿ ನಿರ್ಮಾಣ ವಾಗುವ ಸಾಧ್ಯತೆಗಳಿರುತ್ತದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 10ಕ್ಕಿಂತ ಅಧಿಕ ಮಂದಿ ಸಾರಿ(ಉಸಿರಾಟ)ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಆಕ್ಸಿಜನ್ ಪೂರೈಕೆಗೆ ತೊಡಕು
ಕೋವಿಡ್-19ನಿಂದಾಗಿ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಆಮ್ಲಜನಕದ ಕೊರತೆ ಎದುರಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಟ್ಯಾಂಕ್‌ಗೆ ಆಮ್ಲ ಜನಕ ಎಲ್ಲೂ ಸಿಗದ ಕಾರಣ, ಬಳ್ಳಾರಿಯಿಂದ ತರಿಸಲಾಗಿದೆ.
‘ಈ ಬಗ್ಗೆ ಜಿಲ್ಲಾಧಿಕಾರಿಯೇ ಮುತುವರ್ಜಿ ವಹಿಸಿ ಆದಷ್ಟು ಬೇಗ ಆಮ್ಲಜನಕ ಪೂರೈಕೆ ಆಗುವಂತೆ ನೋಡಿಕೊಂಡಿದ್ದಾರೆ. ಆಮ್ಲಜನಕಕ್ಕೆ ರಾಜ್ಯ ಪ್ರಾಕೃತಿಕ ವಿಕೋಪ ನಿಧಿಯ ಹಣವನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿದಿನ ಕೂಡ ಆಮ್ಲಜನಕದ ಪ್ರಮಾಣವನ್ನು ಪರಿಶೀಲಿಸಬೇಕಾಗುತ್ತದೆ. ಕಡಿಮೆ ಆದ ತಕ್ಷಣ ಮತ್ತೆ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.
ಸರಕಾರದ ಆದೇಶದಂತೆ ದ್ರವ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲಾಗಿದೆ. ಎರಡು ಬಾರಿ ಕರೆಯಲಾದ ಟೆಂಡರ್‌ನಲ್ಲಿ ಯಾರು ಭಾಗವಹಿಸದ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಮುತುವರ್ಜಿ ವಹಿಸಿ ಈ ಟ್ಯಾಂಕ್ ನಿರ್ಮಾಣ ಮಾಡಿದೆ. ಅ.5ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ. ಜಿಲ್ಲಾ ಇಂಜಿನಿಯರ್ ಆಗಮಿಸಿ, ಇದರ ಬಳಕೆ ಬಗ್ಗೆ ಜಿಲ್ಲಾಸ್ಪತ್ರೆಯ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಸದ್ಯವೇ ಶಾಸಕರು, ಡಿಸಿ ಉಪಸ್ಥಿತಿಯಲ್ಲಿ ಸರಳ ರೀತಿಯಲ್ಲಿ ಇದರ ಉದ್ಘಾಟನೆ ಮಾಡಲಾಗುವುದು.
-ಡಾ.ಮಧುಸೂದನ್ ನಾಯಕ್, ಸರ್ಜನ್, ಜಿಲ್ಲಾಸ್ಪತ್ರೆ ಉಡುಪಿ