×
Ad

ಉಡುಪಿ ಜಿಪಂ ಸಿಇಓ ಆಗಿ ಬಂಟ್ವಾಳದ ಡಾ. ನವೀನ್ ಭಟ್ ವೈ.

Update: 2020-10-04 21:04 IST

ಉಡುಪಿ, ಅ.4: ಹಾಸನ ಉಪವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತಿದ್ದ ಡಾ. ನವೀನ್ ಭಟ್ ವೈ. ಅವರನ್ನು ಉಡುಪಿ ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ವರ್ಗಾಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಉಡುಪಿಯಲ್ಲಿ ಈಗ ಜಿಪಂ ಸಿಇಓ ಆಗಿರುವ ಪ್ರೀತಿ ಗೆಹ್ಲೋಟ್ ಅವರನ್ನು ವರ್ಗಾಯಿಸಲಾಗಿದೆ. ಆದರೆ ಸದ್ಯಕ್ಕೆ ಸರಕಾರ ಅವರಿಗೆ ಯಾವುದೇ ಸ್ಥಾನವನ್ನು ತೋರಿಸಿಲ್ಲ. 2019ರ ಸೆಪ್ಟೆಂಬರ್ ತಿಂಗಳ ಮೊದಲ ವಾರ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಸಿಂಧೂ ರೂಪೇಶ್ ಅವರ ಸ್ಥಾನಕ್ಕೆ ಪ್ರೀತಿ ಗೆಹ್ಲೋಟ್ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದರು.

ಇದೀಗ ಸಿಇಓ ಆಗಿ ನೇಮಕಗೊಂಡಿರುವ ನವೀನ್ ಭಟ್ ವೈ. 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 37ನೇ ರ್ಯಾಂಕ್ ಪಡೆದಿದ್ದರು. ಮೂಲತ: ಉಡುಪಿ ಜಿಲ್ಲೆ ಕಾಪು ತಾಲೂಕು ಎಲ್ಲೂರಿನವರಾದ ನವೀನ್ ಭಟ್, ಈಗ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನ ನಿವಾಸಿಯಾಗಿರುವ ಲೋಕೋಪಯೋಗಿ ಇಲಾಖೆಯ ಹಿರಿಯ ಇಂಜಿನಿಯರ್ ಆಗಿರುವ ಉಮೇಶ್ ಭಟ್ ಅವರ ಪುತ್ರ.

ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಮೂಡಬಿದ್ರೆಯ ರೋಟರ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮೂಡಂಕಾಪುವಿನ ಇನ್‌ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಡೆದ ನವೀನ್ ಭಟ್, ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಅಳಕೆಯ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದರು.

2009ರ ರಾಜ್ಯ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದ ನವೀನ್, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ 2015ರಲ್ಲಿ 26ನೇ ರ್ಯಾಂಕಿನೊಂದಿಗೆ ಎಂಬಿಬಿಎಸ್ ಪದವಿ ಪಡೆದಿದ್ದರು. ಸಾರ್ವಜನಿಕ ಸೇವೆಯ ಗುರಿಯೊಂದಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ ಅವರು 2016ರಲ್ಲಿ 37ನೇ ರ್ಯಾಂಕ್‌ನೊಂದಿಗೆ ಐಎಎಸ್‌ನ್ನು ಆಯ್ಕೆ ಮಾಡಿದ್ದರು.

ಮುಸ್ಸೋರಿಯ ಲಾಲ್‌ಬಹಾದ್ದುರ್ ಶಾಸ್ತ್ರಿ ನೇಶನಲ್ ಅಕಾಡೆಮಿ ಆಫ್ ಅಡ್ಮಿಸ್ಟ್ರೇಶನ್‌ನಲ್ಲಿ ಐಎಎಸ್ ತರಬೇತಿ ಪಡೆದು 2019ರಲ್ಲಿ ಜುಲೈನಿಂದ ಮೂರು ತಿಂಗಳು ಡೆಪ್ಯುಟೇಷನ್‌ನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬಳಿಕ ರಾಜ್ಯ ಸೇವೆಗೆ ಬಂದು ಅದೇ ವರ್ಷದ ಅಕ್ಟೋಬರ್ ಮೊದಲ ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News