×
Ad

ಮುಂದಿನ ಕೆಲವು ದಿನಗಳು ನಿರ್ಣಾಯಕ: ಟ್ರಂಪ್

Update: 2020-10-04 21:57 IST

ವಾಶಿಂಗ್ಟನ್,ಅ.4: ಕೋವಿಡ್-19 ಸೋಂಕಿಗಾಗಿ ತಾನು ಪಡೆಯುತ್ತಿರುವ ಚಿಕಿತ್ಸೆಗೆ ಮುಂದಿನ ಕೆಲವು ದಿನಗಳು ನಿರ್ಣಾಯಕವಾಗಿವೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಶ್ವೇತಭವನದ ಅಧಿಕಾರಿಯೊಬ್ಬರು ವ್ಯತಿರಿಕ್ತವಾದ ಸಂದೇಶಗಳನ್ನು ನೀಡಿದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

  ಕೊರೋನ ಸೋಂಕಿಗೊಳಗಾಗಿರುವ ಹಿನ್ನೆಲೆಯಲ್ಲಿ ವಾಶಿಂಗ್ಟನ್‌ನ ವಾಲ್ಟರ್‌ರೀಡ್ ರಾಷ್ಟ್ರೀಯ ಸೇನಾ ಆಸ್ಪತ್ರೆಗೆ ದಾಖಲಾಗಿರುವ ಟ್ರಂಪ್ ಅವರು ಶನಿವಾರ ಟ್ವಿಟ್ಟರ್‌ನಲ್ಲಿ ಪ್ರಸಾರ ಮಾಡಿದ ನಾಲ್ಕು ನಿಮಿಷಗಳ ವೀಡಿಯೊದಲ್ಲಿ ಈ ಹೇಳಿಕೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ತನಗೆ ಮೊದಲಿಗಿಂತ ಚೆನ್ನಾಗಿರುವಂತೆ ಅನಿಸುತ್ತದೆ ಎಂದು ಬಳಲಿದಂತೆ ಕಂಡುಬರುತ್ತಿದ್ದ ಟ್ರಂಪ್ ಹೇಳಿದ್ದಾರೆ.

‘‘ ಮುಂದಿನ ಕೆಲವು ದಿನಗಳವರೆಗೆ ನಿಜವಾದ ಪರೀಕ್ಷೆ ಕಾದಿದೆ ಎಂದು ನಾನು ಊಹಿಸುತ್ತೇನೆ. ಒಂದೆರಡು ದಿನಗಳಲ್ಲಿ ಏನಾಗಲಿದೆಯೆಂದು ನೋಡೋಣ’ ಎಂದು ಟ್ರಂಪ್ ವೀಡಿಯೊ ದಲ್ಲಿ ಹೇಳಿದ್ದಾರೆ.

 ಟ್ರಂಪ್ ದೇಹಸ್ಥ್ಝಿತಿ: ಗೊಂದಲ ಸೃಷ್ಟಿಸಿದ ವೈದ್ಯರು, ಶ್ವೇತಭವನದ ಅಧಿಕಾರಿಗಳ ವ್ಯತಿರಿಕ್ತ ಹೇಳಿಕೆ

 ಟ್ರಂಪ್ ಆರೋಗ್ಯದ ಬಗ್ಗೆ ಶ್ವೇತಭವನದ ಅಧಿಕಾರಿಗಳು ಹಾಗೂ ವೈದ್ಯರುಗಳು ನೀಡಿದ ವಿಭಿನ್ನವಾದ ಹೇಳಿಕೆಗಳು, ಅಮೆರಿಕ ಅಧ್ಯಕ್ಷರ ದೇಹಸ್ಥಿತಿಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಶನಿವಾರ ಬೆಳಗ್ಗೆ ಡಾ. ಸ್ಟೀವ್ ಕೊನ್ಲ ನೇತೃತ್ವದ ಶ್ವೇತಭವನದ ವೈದ್ಯರುಗಳ ತಂಡವು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಟ್ರಂಪ್ ಅವರ ಆರೋಗ್ಯ ಸುಧಾರಿಸುತ್ತಿದೆ ಹಾಗೂ ಅವರು ಶ್ವೇತಭವನಕ್ಕೆ ಹಿಂತಿರುಗುವ ಬಗ್ಗೆ ಮಾತನಾಡುತ್ತಿದ್ದಾರೆ’’ ಎಂದರು.

 ಶ್ವೇತಭವನದ ವೈದ್ಯರ ಪತ್ರಿಕಾಗೋಷ್ಠಿಯ ಕೆಲವೇ ನಿಮಿಷಗಳ ಬಳಿಕ ಶ್ವೇತಭವನದ ಸಿಬ್ಬಂದಿ ವರಿಷ್ಠ ಮಾರ್ಕ್ ಮಿಡೋಸ್ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದು, ಕಳೆದ 24 ತಾಸುಗಳಲ್ಲಿ ಟ್ರಂಪ್ ಅವರ ದೇಹಸ್ಥಿತಿಯು ಅತ್ಯಂತ ಕಳವಳಕಾರಿಯಾಗಿದೆ. ಅವರ ಶುಶ್ರೂಷೆಗೆ ಮುಂದಿನ 24 ತಾಸುಗಳು ನಿರ್ಣಾಯಕವಾಗಿವೆ ಎಂದರು. ಅವರು ಇನ್ನೂ ಸಂಪೂರ್ಣ ಚೇತರಿಕೆಯ ಹಾದಿಯಲ್ಲಿ ಇಲ್ಲ’’ ಎಂದು ತಿಳಿಸಿದ್ದರು.

    ತನ್ನ ಹೆಸರನ್ನು ಉಲ್ಲೇಖಿಸಬಾರದೆಂಬ ಷರತ್ತಿನಲ್ಲಿ ಮಿಡೋಸ್ ಈ ಹೇಳಿಕೆ ನೀಡಿದ್ದರು. ಆದರೆ ಕೆಲವೇ ತಾಸುಗಳ ಬಳಿಕ ಅವರು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಾ, ಟ್ರಂಪ್ ತುಂಬಾ ಚೆನ್ನಾಗಿದ್ದಾರೆ ಹಾಗೂ ಅವರ ಚೇತರಿಕೆಯ ಬಗ್ಗೆ ವೈದ್ಯರುಗಳು ಸಂತುಷ್ಟರಾಗಿದ್ದಾರೆ’’ ಎಂದು ಹೇಳಿದ್ದರು.

  ಗುರುವಾರ ಸಂಜೆ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲನಿಯಾಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ದಂಪತಿ ಶ್ವೇತಭವನದಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಟ್ರಂಪ್ ಅವರನ್ನು ವಾಲ್ಟರ್‌ರೀಡ್ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 ಟ್ರಂಪ್ ಅವರಿಗೆ ಉಸಿರಾಟದ ಸಮಸ್ಯೆಗಳು ಕಂಡುಬಂದಿದ್ದರಿಂದ ಹಾಗೂ ಅವರ ದೇಹದಲ್ಲಿ ಆಮ್ಲಜನಕದ ಮಟ್ಟದಲ್ಲಿ ಕುಸಿತ ಕಂಡುಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಶ್ವೇತಭವನದ ಮೂಲವೊಂದು ತಿಳಿಸಿದೆ. ಆದರೆ ಶ್ವೇತಭವನದ ವೈದ್ಯ ಸೀನ್ ಪಿ. ಕೊನ್ಲೆ ಅವರು ಟ್ರಂಪ್‌ಗೆ ಯಾವುದೇ ಉಸಿರಾಟದ ಸಮಸ್ಯೆಯಿಲ್ಲವೆಂದು ಹೇಳಿದ್ದಾರೆ ಮತ್ತು ವಾಲ್ಟರ್‌ರೀಡ್ ಸೇನಾಸ್ಪತ್ರೆಯಲ್ಲಿ ಅವರಿಗೆ ಆಮ್ಲಜನಕವನ್ನು ನೀಡಲಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಟ್ರಂಪ್‌ಗೆ ರೆಮ್‌ಡೆಸಿವಿರ್ ಔಷಧಿ ಚಿಕಿತ್ಸೆ

 ವಾಶಿಂಗ್ಟನ್‌ನ ವಾಲ್ಟರ್‌ರೀಡ್ ಸೇನಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟ್ರಂಪ್ ಅವರಿಗೆ ವೈರಾಣು ನಿರೋಧಕ ಔಷಧಿ ರೆಮ್‌ಡೆಸಿವಿರ್ ನೀಡಲಾಗುತ್ತಿದೆಯೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ರೆಮ್‌ಡೆಸಿವಿರ್ ಔಷಧಿಯು ಹಲವಾರು ಕೊರೋನ ರೋಗಿಗಳ ಚೇತರಿಕೆಯನ್ನು ತ್ವರಿತಗೊಳಿಸಿದೆಯೆನ್ನಲಾಗಿದೆ. ಡಾ. ಸ್ಟೀವ್ ಕೊನ್ಲಿ ಅವರು ಶನಿವಾರ ರಾತ್ರಿ 9:00 ಗಂಟೆಗೆ ನೀಡಿದ ಹೇಳಿಕೆಯೊಂದರಲ್ಲಿ ಟ್ರಂಪ್ ಅವರಿಗೆ ಯಾವುದೇ ಜ್ವರದ ಸಮಸ್ಯೆಯಿಲ್ಲ ಹಾಗೂ ಕೃತಕ ಆಮ್ಲಜನಕ ವ್ಯವಸ್ಥೆಯಲ್ಲಿಲ್ಲವೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News