ಪಚ್ಚನಾಡಿಯಲ್ಲಿ ಮನೆಗೆ ನುಗ್ಗಿ ಹಲ್ಲೆ: ಪ್ರಕರಣ ದಾಖಲು
Update: 2020-10-04 22:32 IST
ಮಂಗಳೂರು, ಅ.4: ಮಾದಕ ದ್ರವ್ಯದ ಮತ್ತಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಮನೆಮಂದಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಘಟನೆ ನಗರದ ಪಚ್ಚನಾಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಪಚ್ಚನಾಡಿಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ತಂಡವು ದಾಂಧಲೆ ನಡೆಸಿದೆ. ದುಷ್ಕರ್ಮಿಗಳಲ್ಲಿ ಓರ್ವ ರೌಡಿಶೀಟರ್ ಇದ್ದ ಎನ್ನಲಾಗಿದೆ. ಈತ ಪಚ್ಚನಾಡಿಯಲ್ಲಿ ದಾಂಧಲೆ ನಡೆಸುತ್ತಿದ್ದಾನೆ. ಇದನ್ನು ಪ್ರಶ್ನಿಸಿದರೆ ರಾತ್ರಿ ವೇಳೆ ಮನೆಗೆ ಬಂದು ಹಲ್ಲೆ ನಡೆಸುವುದಲ್ಲದೆ, ಜೀವಬೆದರಿಕೆ ಒಡ್ಡುತ್ತಾನೆ ಎಂಬ ಆರೋಪವಿದೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ ಎನ್ನಲಾಗಿದ್ದು, ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿರುವ ಮಂಗಳೂರು ಗ್ರಾಮಾಂತರ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.