×
Ad

ಅರುಣಾಚಲಪ್ರದೇಶ: ಶಂಕಿತ ಉಲ್ಫಾ ಉಗ್ರರ ದಾಳಿಗೆ ಓರ್ವ ಯೋಧ ಹುತಾತ್ಮ

Update: 2020-10-04 22:51 IST

ಗುವಾಹತಿ, ಅ. 4: ಅರುಣಾಚಲ ಪ್ರದೇಶದ ಮ್ಯಾನ್ಮಾರ್ ಗಡಿಯಲ್ಲಿ ರವಿವಾರ ಬೆಳಗ್ಗೆ ಶಂಕಿತ ಉಲ್ಫಾ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಓರ್ವ ಯೋಧ ಹುತಾತ್ಮನಾಗಿದ್ದಾನೆ ಹಾಗೂ ಇನ್ನೋರ್ವ ಯೋಧ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಟಾನಗರ 300 ಕಿ.ಮೀ. ದೂರದಲ್ಲಿರುವ ಚಂಗ್ಲಾಂಗ್ ಜಿಲ್ಲೆಯ ಜೈರಾಮ್‌ಪುರ ಪೊಲೀಸ್ ರಾಣೆ ವ್ಯಾಪ್ತಿಯಲ್ಲಿ ಬರುವ ಟೆಂಗ್ಮೋ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶ ಮೊನ್ಮಾವೊನ ಹೆಟ್ಲೋಂಗ್ ಗ್ರಾಮಕ್ಕೆ ಸಮೀಪ ಇದೆ. ‘‘ಈ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ. ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಸಾಮೂಹಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲದೆ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದೇವೆ’’ ಎಂದು ಚಂಗ್ಲಾಂಗ್ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ. ಉಲ್ಫಾದ ಪರೇಶ್ ಬರುವಾ ನೇತೃತ್ವದ ಸ್ವತಂತ್ರ ಬಣದೊಂದಿಗೆ ಎನ್‌ಎಸ್‌ಸಿಎನ್ (ಕಪ್ಲಾಂಗ್) ಉಗ್ರರು ಸೇರಿ 30ರಿಂದ 35 ಇದ್ದ ಉಗ್ರರ ಗುಂಪು ಈ ಹೊಂಚು ದಾಳಿಯ ಹಿಂದಿದೆ ಎಂದು ಸೇನಾ ಬೇಹುಗಾರಿಕೆ ಮೂಲಗಳು ತಿಳಿಸಿವೆ.

ಅಸ್ಸಾಂ ರೈಫಲ್ಸ್‌ನ ನೀರಿನ ಟ್ಯಾಂಕರ್ ತಮ್ಮ ವ್ಯಾಪ್ತಿಯ ಒಳಗೆ ಬರುತ್ತಿರುವುದನ್ನು ಗಮನಿಸಿ ಉಗ್ರರು ಹೊಂಚು ದಾಳಿ ನಡೆಸಿದರು. ಗ್ರೆನೇಡ್ ಪ್ರಯೋಗಿಸಿದರು ಹಾಗೂ ಅಟೋಮ್ಯಾಟಿಕ್ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಿದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News