×
Ad

ಆಹಾರ ಕಿಟ್ ವಿತರಣೆಯಲ್ಲಿ ಕಾರ್ಕಳ ಶಾಸಕರಿಂದ ಭಾರೀ ವಂಚನೆ: ಶುಭದ ರಾವ್ ಗಂಭೀರ ಆರೋಪ

Update: 2020-10-05 18:36 IST

ಉಡುಪಿ, ಅ.5: ಲಾಕ್‌ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಆಹಾರ ಕಿಟ್ ವಿತರಣೆಯ ಬೋಗಸ್ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸುವ ಮೂಲಕ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಂಚನೆ ಎಸಗಿರುವುದು ಮಾಹಿತಿ ಹಕ್ಕಿನ ಮೂಲಕ ಪಡೆದ ದಾಖಲೆಗಳಿಂದ ಸಾಬೀತಾಗಿದೆ ಎಂದು ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಕಳದ ಕಟ್ಟಡ ಕಾರ್ಮಿಕರಿಗೆ 5000 ಆಹಾರ ಕಿಟ್ ವಿತರಿಸಲು 44.95 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಿತ್ತು. ಆ ಆಹಾರ ಕಿಟ್‌ನ್ನು ನ್ಯಾಯ ಯುತವಾಗಿ ವಿತರಿಸದೆ ಕಾರ್ಕಳ ಶಾಸಕರು ತಮ್ಮದೇ ಸರಕಾರಕ್ಕೆ ಮತ್ತು ಜನತೆಗೆ ದ್ರೋಹ ಬಗೆದಿದ್ದಾರೆ. ಆದುದರಿಂದ ಶಾಸಕರು ತಕ್ಷಣವೇ ರಾಜೀನಾಮೆ ನೀಡ ಬೇಕು ಮತ್ತು ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಕೋವಿಡ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು 13 ಆಹಾರ ಪದಾರ್ಥಗಳನ್ನು ಒಳ ಗೊಂಡು ಒಂದು ಕಿಟ್‌ಗೆ 899ರೂ.ನಂತೆ 5ಸಾವಿರ ಕಿಟ್‌ಗೆ ಅನುದಾನ ಬಿಡು ಗಡೆ ಮಾಡಿತ್ತು. ಕಿಟ್‌ನ್ನು ಪಡೆದ ಫಲಾನುಭವಿಗಳ ವಿವರಗಳನ್ನು ಮಾಹಿತಿ ಹಕ್ಕಿನ ಮೂಲಕ ಪಡೆದು ಪರಿಶೀಲಿಸಿದಾಗ ಇದೊಂದು ಬೋಗಸ್ ಪಟ್ಟಿ ಎಂಬುದು ಮತ್ತು ಈ ಪಟ್ಟಿಯ ಮೂಲಕ ಅವ್ಯವಹಾರ ನಡೆಸಿ ಸರಕಾರಕ್ಕೆ ಮತ್ತು ಜನತೆಗೆ ವಂಚಿಸಿರುವುದು ಕಂಡುಬಂದಿದೆ ಎಂದು ಅವರು ದೂರಿದರು.

ಆಹಾರ ಕಿಟ್ ವಿತರಿಸಲು ಕರೆಯಲಾಗಿದ್ದ ಕೋಟೇಷನ್ ಕೂಡ ನಕಲಿ ಮತ್ತು ಬೋಗಸ್ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ಬಿಜೆಪಿ ಪಕ್ಷದ ಪದಾಧಿಕಾರಿಗಳಿಂದಲೇ ಕೋಟೇಷನ್ ಪಡೆಯುವ ಮೂಲಕ ಅವರನ್ನು ಬಲಿಪಶು ಮಾಡಲಾಗಿದೆ. ಹೀಗೆ ಸರಕಾರದ ಹಣವನ್ನು ಬಡವರ ಹೆಸರಿನಲ್ಲಿ ಲೂಟಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಕಿಟ್ ವಿತರಿಸಿದ ಏಜೆನ್ಸಿಯವರ ಬ್ಯಾಂಕ್ ಖಾತೆಗೆ ಕಾರ್ಮಿಕ ಇಲಾಖೆ ಯಿಂದ ನೇರವಾಗಿ ಹಣ ಪಾವತಿಯಾಗಿದ್ದು, ಆ ಏಜೆನ್ಸಿಯ ಅದೇ ಖಾತೆ ಯಿಂದ ಬಿಜೆಪಿ ಪಕ್ಷದ ಪದಾಧಿಕಾರಿಯವರ ಬ್ಯಾಂಕ್ ಖಾತೆಗಳಿಗೆ ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿದೆ. ಇದು ಈ ಕಿಟ್ ವಿತರಣೆಯಲ್ಲಿ ಆಗಿರುವ ಅವ್ಯವಹಾರಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಈ ಫಲಾನುಭವಿಗಳ ಪಟ್ಟಿ ಬೋಗಸ್ ಅಲ್ಲ ಎಂಬುದನ್ನು ಶಾಸಕರು ಸಾಬೀತುಪಡಿಸಬೇಕು ಎಂದು ಅವರು ಸವಾಲು ಹಾಕಿದರು.

ಸುದ್ದಿಗೋಷ್ಟಿಯಲ್ಲಿ ಮಾಳ ಗ್ರಾಪಂ ಮಾಜಿ ಅಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಕಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣ ಶೆಟ್ಟಿ, ಸಾಮಾಜಿಕ ಜಾಲತಾಣ ಘಟಕದ ಜಿಲ್ಲಾಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ, ಚಿನ್ನದ ಕೆಲಸಗಾರ ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.

ಪಟ್ಟಿಯಲ್ಲಿ ಮೃತಪಟ್ಟವರ ಹೆಸರು !

ಈ ಪಟ್ಟಿಯಲ್ಲಿ ಕಾರ್ಮಿಕ ಮಂಡಳಿಯ ಇತರ ಯೋಜನೆಯ ಫಲಾನು ಭವಿಗಳ ಹಾಗೂ 2019ರ ಜುಲೈ ತಿಂಗಳಲ್ಲಿ ನಿಧನರಾದ ಕಾರ್ಕಳ ಉಮ್ಮಾರ ಬೆಟ್ಟು ನಿವಾಸಿ ಕೇಶವ ರಾವ್ ಅವರ ಹೆಸರು ಕೂಡ ಇದೆ ಎಂದು ಶುಭದ್ ರಾವ್ ಆರೋಪಿಸಿದ್ದಾರೆ.

ಬಡವರ ಹೆಸರಿನಲ್ಲಿ ಊರಿನ ದಾನಿಗಳಿಂದ ಹಣ ಸಂಗ್ರಹ ಮಾಡಿದ್ದ ಶಾಸಕರು ಆ ಹಣದಲ್ಲಿ ಸುಮಾರು 350 ರೂ.ಗಳ ಸಣ್ಣ ಸಣ್ಣ ಆಹಾರ ಕಿಟ್ ಗಳನ್ನು ಚಿನ್ನದ ಕೆಲಸಗಾರರು, ಕ್ಷೌರಿಕರು, ಮಡಿವಾಳರು, ರಿಕ್ಷಾ ಚಾಲಕ ಮಾಲಕರು, ಬಸ್ ಸಿಬ್ಬಂದಿಗಳು ಮತ್ತು ಇತರರಿಗೆ ವಿತರಿಸಿದ್ದಾರೆ. ಇವರ ಹೆಸರನ್ನೇ ಪಟ್ಟಿ ಮಾಡಿ ಕಾರ್ಮಿಕ ಇಲಾಖೆಗೆ ಸುಳ್ಳು ಮಾಹಿತಿ ಕಳುಹಿಸಲಾಗಿದೆ ಎಂದು ಅವರು ದೂರಿದರು.

''ಲಾಕ್‌ಡೌನ್ ಸಂದರ್ಭದಲ್ಲಿ ನಾನೇ ಹಲವು ಮಂದಿ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದೇನೆ. ಆದರೆ ಈಗ ಫಲಾನುಭವಿಗಳ ಪಟ್ಟಿಯಲ್ಲಿ ನನ್ನದೇ ಹೆಸರು ಇರುವುದು ನೋಡಿ ಆಶ್ಚರ್ಯ ಆಗಿದೆ. ದಾನಿಗಳ ಹೆಸರನ್ನೇ ಫಲಾನು ಭವಿಗಳ ಪಟ್ಟಿಯಲ್ಲಿ ಸೇರಿಸಿರುವುದು ದುರಂತ.''

-ಸುರೇಶ್ ಆಚಾರ್ಯ, ಚಿನ್ನದ ಕೆಲಸಗಾರ, ಕಾರ್ಕಳ

''ಆಹಾರ ಕಿಟ್ ವಿತರಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ಪೀಚು ಕಾರ್ಕಳ ಎಂಬ ಹೆಸರು ಕೂಡ ಇದೆ. ಕಾರ್ಕಳದಲ್ಲಿ ನನ್ನ ಬಿಟ್ಟರೆ ಪೀಚು ಎಂಬ ಹೆಸರಿನಲ್ಲಿ ಬೇರೆ ಯಾರು ಇಲ್ಲ. ಆದುದರಿಂದ ನನ್ನದೇ ಹೆಸರನ್ನು ಈ ಪಟ್ಟಿಗೆ ಸೇರಿಸಿದ್ದಾರೆ. ಆದರೆ ನನಗೆ ಸರಕಾರದಿಂದ ಯಾವುದೇ ರೀತಿಯ ಆಹಾರದ ಕಿಟ್ ಸಿಕ್ಕಿಲ್ಲ. ಹೀಗೆ ನನ್ನ ಹಾಗೆ ಎಷ್ಟು ಮಂದಿಯ ಹೆಸರನ್ನು ಇದಕ್ಕೆ ಸೇರಿದ್ದಾರೆ ಎಂಬುದು ಮುಖ್ಯ ಪ್ರಶ್ನೆ.

-ರಾಜೇಂದ್ರ ಪ್ರಸಾದ್ ಯಾನೆ ಪೀಚು, ಬಸ್ ಏಜೆಂಟ್, ಕಾರ್ಕಳ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News