×
Ad

ಉಡುಪಿ ಜಿಪಂ ಸಿಇಓ ಆಗಿ ಡಾ.ನವೀನ್ ಭಟ್ ಅಧಿಕಾರ ಸ್ವೀಕಾರ

Update: 2020-10-05 20:12 IST

ಉಡುಪಿ, ಅ.5: ಉಡುಪಿ ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ (ಸಿಇಓ) ಡಾ. ನವೀನ್ ಭಟ್ ವೈ. ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

2017ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ 28ರ ಹರೆಯದ ನವೀನ್ ಭಟ್ ದಕ್ಷಿಣ ಕನ್ನಡದ ಬಂಟ್ವಾಳದವರಾದರೂ ಮೂಲತ: ಕಾಪು ತಾಲೂಕಿನ ಎಲ್ಲೂರಿನವರು. ತಮ್ಮ ಮೊದಲ ಪೋಸ್ಟಿಂಗ್ ಆಗಿ ಹಾಸನ ಉಪವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿ 2019ರ ಅಕ್ಟೋಬರ್‌ನಿಂದ ಕರ್ತವ್ಯ ನಿರ್ವಹಿಸಿದ್ದರು.

ಡಾ.ನವೀನ್ ಭಟ್ ಅವರು ಇಂದು ಬೆಳಗ್ಗೆ ಪ್ರೀತಿ ಗೆಹ್ಲೋಟ್‌ರಿಂದ ಅಧಿಕಾರ ಸ್ವೀಕರಿಸಿದರು. 2019ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡುಪಿ ಸಿಇಓ ಆಗಿ ಅಧಿಕಾರ ಸ್ವೀಕರಿಸಿದ್ದ ಪ್ರೀತಿ ಗೆಹ್ಲೋಟ್‌ರನ್ನು ವರ್ಗಾವಣೆ ಮಾಡಿದ್ದರೂ, ಸರಕಾರ ಅವರಿಗೆ ಸದ್ಯ ಯಾವುದೇ ಸ್ಥಾನ ತೋರಿಸಿಲ್ಲ.

ಡಾ.ನವೀನ್ ಭಟ್, 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 37ನೇ ರ್ಯಾಂಕ್ ಪಡೆದಿದ್ದರು. ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಮೂಡಬಿದ್ರೆಯ ರೋಟರ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮೂಡಂಕಾಪು ವಿನ ಇನ್‌ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಡೆದ ನವೀನ್ ಭಟ್, ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಅಳಕೆಯ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದರು. 2009ರ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದ ಇವರು 2015ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿಯನ್ನು 26ನೇ ರ್ಯಾಂಕಿನೊಂದಿಗೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News