ಹೆಣ್ಣಿನ ಪೂಜೆ ಬೇಡ, ಬದುಕಲು ಅವಕಾಶ ಕೊಡಿ: ಜ್ಯೋತಿ ಹೆಬ್ಬಾರ್

Update: 2020-10-05 14:48 GMT

ಉದ್ಯಾವರ, ಅ.5: ದೇಶ ಪ್ರಾಚೀನ ಕಾಲದಿಂದಲೂ ಹೆಣ್ಣನ್ನು ಗೌರವಿಸುತ್ತಾ ಬಂದಿದೆ. ಹೆಣ್ಣನ್ನು ಪೂಜಿಸುವ ಸಂಸ್ಕೃತಿಯೂ ಇಲ್ಲಿ ಬೆಳೆದು ಬಂದಿದೆ. ಆದರೆ ಇಂದು ದಿನ ಬೆಳಗಾದರೆ ದೇಶದಲ್ಲಿ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗು ತ್ತಿದ್ದಾರೆ. ಉತ್ತರ ಪ್ರದೇಶದಲ್ಲಂತೂ ಅತ್ಯಾಚಾರದ ಪ್ರಕರಣ ಗರಿಷ್ಠ ಸಂಖ್ಯೆ ಯಲ್ಲಿದೆ. ಹೀಗಾಗಿ ನಮ್ಮೆಲ್ಲರ ಮನವಿ ಏನೆಂದರೆ, ಹೆಣ್ಣನ್ನು ಪೂಜಿಸೋದು ಬೇಡ; ಅವರನ್ನು ನಿರಾತಂಕವಾಗಿ ಬದುಕಲು ಬಿಡಿ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಹೇಳಿದ್ದಾರೆ.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ, ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಮನಿಷಾ ವಾಲ್ಮೀಕಿ ಎಂಬ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಆಗ್ರಹಿಸಿ ಉದ್ಯಾವರ ಪೇಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗಹಿಸಿ ಅವರು ಮಾತನಾಡುತಿದ್ದರು.

ಕೇವಲ ಅಧಿಕಾರದ ಲಾಲಸೆಯಿಂದ ಕೇಸರಿ ವೇಷಧಾರಿಯಾಗಿ ಯೋಗಿ ಅನ್ನೋ ಹೆಸರನ್ನು ಇಟ್ಟುಕೊಂಡು ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ನಿಜವಾಗಿಯೂ ಯೋಗಿಯಲ್ಲ, ಆತ ಒಬ್ಬ ಭೋಗಿ. ಕೂಡಲೇ ಮನಿಷಾ ವಾಲ್ಮೀಕಿಗೆ ನ್ಯಾಯ ದೊರಕಿಸಿಕೊಡಿ, ಇಲ್ಲವಾದಲ್ಲಿ ಕಾವಿ ಕಳಚಿ ಮುಖ್ಯಮಂತ್ರಿ ಪದ ತ್ಯಾ ಮಾಡಿ ಎಂದವರು ಒತ್ತಾಯಿಸಿದರು.

ಗಾಂಧಿ ಪ್ರತಿಪಾದಿಸಿದ ಸಿದ್ಧಾಂತದ ವಿರುದ್ಧವಾಗಿ ದೇಶವಿಂದು ಸಾಗುತ್ತಿದೆ. ಉತ್ತರ ಪ್ರದೇಶದಲ್ಲಂತೂ ಚುನಾಯಿತ ಸರಕಾರವಿದೆಯೋ ಅಥವಾ ಸರ್ವಾಧಿಕಾರಿಗಳ ಆಡಳಿತವೇ ಎಂಬ ಸಂಶಯ ಕಾಡುತ್ತಿದೆ. ಆಡಳಿತ ಪಕ್ಷದ ಜನಪ್ರತಿನಿಧಿಗಳೇ ಅತ್ಯಾಚಾರದಲ್ಲಿ ಭಾಗಿಯಾಗುತ್ತಾರೆ. ಸಾಕ್ಷಿಗಳನ್ನು ಕೊಲ್ಲಲಾ ಗುತ್ತದೆ. ಮನಿಷಾ ವಾಲ್ಮೀಕಿ ಮೇಲಿನ ಅತ್ಯಾಚಾರ ಮತ್ತು ನಂತರ ನಡೆದ ವಿದ್ಯಮಾನಗಳು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಸಿ ಬಳಿಯುವ ಕೆಲಸವಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನುಡಿದರು.

ಕಾಂಗ್ರೆಸ್‌ನ ಹಿರಿಯ ನಾಯಕಿ ತಾಪಂ ಸದಸ್ಯೆ ವೆರೋನಿಕಾ ಕರ್ನೇಲಿಯೋ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಟನೆಯಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸೆ ಫೆರ್ನಾಂಡಿಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೆಲನ್ ಫೆರ್ನಾಂಡಿಸ್, ಎಸ್‌ಸಿ,ಎಸ್‌ಟಿ ಘಟಕದ ಗಿರೀಶ್ ಗುಡ್ಡೆಯಂಗಡಿ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ ಭಾಗವಹಿಸಿದ್ದರು.

ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಲೋರೆನ್ಸ್ ಡೇಸಾ ಸ್ವಾಗತಿಸಿ, ವಂದಿಸಿದರು. ಪ್ರತಿಭಟನೆಗೆ ಮುನ್ನ ಮಸೀದಿ ಬಳಿಯ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಸ್ಥಳ ಮಠದಂಗಡಿ ಪೇಟೆಯ ತನಕ ಕಾರ್ಯಕರ್ತರು ಕ್ಯಾಂಡಲ್ ಮೆರವಣಿಗೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News