ಹತ್ರಸ್ ಅತ್ಯಾಚಾರ ಪ್ರಕರಣ: ಅಮೆರಿಕದಾದ್ಯಂತ ಎನ್‌ಆರ್‌ಐಗಳಿಂದ ಪ್ರತಿಭಟನೆ
ನ್ಯೂಯಾರ್ಕ್, ಅ. 5: ಉತ್ತರಪ್ರದೇಶದ ಹತ್ರಸ್‌ನಲ್ಲಿ ನಾಲ್ವರು ಠಾಕೂರರಿಂದ ಬರ್ಬರ ಅತ್ಯಾಚಾರಕ್ಕೊಳಗಾಗಿ ದಾರುಣವಾಗಿ ಕೊಲೆಗೀಡಾಗಿರುವ 19 ವರ್ಷದ ದಲಿತ ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ನ್ಯೂಯಾರ್ಕ್, ನ್ಯೂಜರ್ಸಿ, ಪೆನ್ಸಿಲ್ವೇನಿಯ ಮತ್ತು ಮಿಶಿಗನ್ ಸೇರಿದಂತೆ ಅಮೆರಿಕದಾದ್ಯಂತ ವಿವಿಧ ನಗರಗಳಲ್ಲಿ ರವಿವಾರ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಪ್ರತಿಭಟನೆ ನಡೆಸಿದರು.
‘ಅಂಬೇಡ್ಕರ್ ಇಂಟರ್‌ನ್ಯಾಶನಲ್ ಮಿಶನ್ (ಎಐಎಮ್)’ ಎಂಬ ಸಂಘಟನೆಯ ಅಡಿಯಲ್ಲಿ ಶಾಂತಿಯುತ ಪ್ರತಿಭಟನಾ ಪ್ರದರ್ಶನಗಳು ನಡೆದವು. ‘ಅಮಾನುಷ ಹಾಗೂ ಭೀಕರ’ ಕೃತ್ಯವನ್ನು ಖಂಡಿಸಿದ ಪ್ರತಿಭಟನಕಾರರು, ಅತ್ಯಾಚಾರಿಗಳು ಮತ್ತು ಹಂತಕರಿಗೆ ಶೀಘ್ರವಾಗಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ಬಲಿಪಶು ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಅವರು ಆಗ್ರಹಿಸಿದರು.
ಆರೋಪಿಗಳನ್ನು ರಕ್ಷಿಸುತ್ತಿರುವ ಅಧಿಕಾರಿಗಳು ಮತ್ತು ಇದರಲ್ಲಿ ಶಾಮೀಲಾಗಿರುವ ಸರಕಾರಿ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆಯೂ ಅವರು ಒತ್ತಾಯಿಸಿದರು.
ದಲಿತ ಮಹಿಳೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಟೈಮ್ಸ್ ಸ್ಕ್ವೇರ್‌ನ ರಸ್ತೆಗಳು ಮತ್ತು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಸಮೀಪ ಪ್ರದರ್ಶನಗಳು ನಡೆದವು.