ಡಿಕೆಶಿಯ ಮಾನಸಿಕ ಸ್ಥೈರ್ಯ ಕುಗ್ಗಿಸುವ ತಂತ್ರ : ಐವನ್ ಡಿಸೋಜ, ಯು.ಟಿ.ಖಾದರ್ ಆರೋಪ
ಮಂಗಳೂರು, ಅ.5: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ಸಿಬಿಐ ದಾಳಿ ನಡೆಸಿರುವುದರ ಹಿಂದೆ ರಾಜಕೀಯ ಅಜೆಂಡಾ ಇದೆ. ಅವರ ಮಾನಸಿಕ ಸ್ಥೈರ್ಯ ಕುಗ್ಗಿಸುವ ತಂತ್ರ ಅಡಗಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರರಾದ ಐವನ್ ಡಿಸೋಜ-ಯು.ಟಿ.ಖಾದರ್ ಆರೋಪಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೆ ಡಿಕೆಶಿ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದಿದೆ, ಅವರನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರೊಬ್ಬರು ಹೈಕೋರ್ಟ್‌ಗೂ ಮೊರೆ ಹೋಗಿದ್ದಾರೆ. ಆದಾಗ್ಯೂ ಬಿಜೆಪಿ ಸರಕಾರ ಡಿಕೆಶಿ ಮತ್ತವರ ಅಣ್ಣ ಡಿಕೆ ಸುರೇಶ್ ಮನೆ ಮೇಲೆ ದಾಳಿ ನಡೆಸಿದೆ. ಇದು ಖಂಡನೀಯ.
ಇನ್ನೇನೋ ವಿಧಾನ ಪರಿಷತ್‌ನ ನಾಲ್ಕು ಮತ್ತು ವಿಧಾನಸಭೆಯ ಎರಡು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸೋಲಿನ ಭೀತಿ ಎದುರಿಸುವ ಬಿಜೆಪಿಯು ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮಾನಸಿಕ ಸ್ಥೈರ್ಯ ಕುಗ್ಗಿಸಲು ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡಿವೆ. ಕಾಂಗ್ರೆಸ್ ಈ ತಂತ್ರಕ್ಕೆ ಜಗ್ಗುವುದಿಲ್ಲ, ಕುಗ್ಗುವುದಿಲ್ಲ. ಸಮರ್ಥವಾಗಿ ಎದುರಿಸಲಿದೆ. ಡಿಕೆಶಿ ಜೊತೆ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ನಿಲ್ಲಲಿದ್ದಾರೆ ಎಂದರು.
ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣವು ದೇಶಾದ್ಯಂತ ಆಕ್ರೋಶ ಸೃಷ್ಟಿಸಿದೆ. ಇದರಿಂದ ಹತಾಶೆಗೊಂಡ ಬಿಜೆಪಿ ಜನರ ಗಮನವನ್ನು ಬೇರೆಕಡೆ ಸೆಳೆಯಲು ತಂತ್ರ ಹೂಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕರಾದ ಸದಾಶಿವ ಉಳ್ಳಾಲ, ನವೀನ್ ಡಿಸೋಜ, ಸಂತೋಷ್ ಕುಮಾರ್, ದಿನಕರ ಶೆಟ್ಟಿ, ಸತೀಶ್ ಪೆಂಗಲ್ ಉಪಸ್ಥಿತರಿದ್ದರು.