ಉಡುಪಿ ಜಿಲ್ಲೆಯಲ್ಲಿ 118 ಮಂದಿಗೆ ಕೊರೋನ ಸೋಂಕು, ಮೂವರು ಕೋವಿಡ್ ಗೆ ಬಲಿ
ಉಡುಪಿ, ಅ. 5: ರಾಜ್ಯ ಆರೋಗ್ಯ ಇಲಾಖೆ ಸೋಮವಾರ ರಾತ್ರಿ ಪ್ರಕಟಿಸಿದ ಕೋವಿಡ್- 19 ರಾಜ್ಯ ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ 118 ಮಂದಿ ಯಲ್ಲಿ ಹೊಸದಾಗಿ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ದೃಢಪಟ್ಟವರ ಸಂಖ್ಯೆ 18,138ಕ್ಕೇರಿದೆ.
ಅಲ್ಲದೇ ದಿನದಲ್ಲಿ 23 ಮಂದಿ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಹೀಗೆ ಮನೆಗೆ ತೆರಳಿದವರ ಒಟ್ಟು ಸಂಖ್ಯೆ 15,744ಕ್ಕೇರಿದೆ. ಜಿಲ್ಲೆಯಲ್ಲಿ ಸದ್ಯ 2237 ಸಕ್ರೀಯ ಕೋವಿಡ್ ಪ್ರಕರಣಗಳಿವೆ.
ಸೋಮವಾರ ಜಿಲ್ಲೆಯಲ್ಲಿ ಮೂವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿ ಯಾದವರ ಒಟ್ಟು ಸಂಖ್ಯೆ 157ಕ್ಕೇರಿದೆ. ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತಿದ್ದ 45 ವರ್ಷ ಪ್ರಾಯದ ಪುರುಷ ಸೆ.23ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು ಅ.2ರಂದು ಮೃತಪಟ್ಟಿದ್ದರು.
64ವರ್ಷ ಪ್ರಾಯದ ಹಿರಿಯ ನಾಗರಿಕರು ರವಿವಾರ ಕೋವಿಡ್ ಸೋಂಕಿನಿಂದ ಮೃತಪಟ್ಟರೆ, 58 ವರ್ಷ ಪ್ರಾಯದ ಮಹಿಳೆಯೊಬ್ಬರು ಸೋಮವಾರ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮಂಗಳವಾರ ಸಚಿವರೊಂದಿಗೆ ಮಾತುಕತೆ
ಈ ನಡುವೆ ಸಮಾನ ಕೆಲಸ, ಸಮಾನ ವೇತನವೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಸೆ.24ರಿಂದ ಮುಷ್ಕರ ನಡೆಸಿರುವ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಇಂದು ಸಹ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಎದುರು ತಮ್ಮ ಧರಣಿ ಮುಷ್ಕರವನ್ನು ಮುಂದುವರಿಸಿದರು.
ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ದೇಶನ ದಂತೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಸಂಘದ ಪದಾಧಿಕಾರಿ ಗಳನ್ನು ನಾಳೆ ಮಾತುಕತೆಗೆ ಆಹ್ವಾನಿಸಿದ್ದು, ಮಾತುಕತೆ ಫಲಪ್ರದವಾದರೆ ಬುಧವಾರ ದಿಂದ ತಾವು ಕೆಲಸಕ್ಕೆ ಹಾಜರಾಗುವುದಾಗಿ ಜಿಲ್ಲಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿರುವ ಎನ್‌ಎಚ್‌ಎನ 512 ಮಂದಿ ನೌಕರರು ನಾಳೆಯೂ ಮುಷ್ಕರ ನಡೆಸಲಿದ್ದಾರೆ.