ಹೆಪಟೈಟಿಸ್ ಸಿ ವೈರಸ್ ಸಂಶೋಧಿಸಿದ ಮೂವರು ಸಾಧಕರಿಗೆ ವೈದ್ಯಕೀಯ ನೊಬೆಲ್ ಪುರಸ್ಕಾರ
ಸ್ಟಾಕ್‌ಹೋಮ್,ಅ.2: ಹೆಪಟೈಟಿಸ್ ಸಿ ವೈರಸ್ ಪತ್ತೆ ಹಚ್ಚಿದ ಮೂವರು ವಿಜ್ಞಾನಿಗಳು 2020ರ ಸಾಲಿನ ವೈದ್ಯಕೀಯ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಬ್ರಿಟನ್‌ನ ವಿಜ್ಞಾನಿ ಮೈಕೆಲ್ ಹೌಟನ್ ಹಾಗೂ ಅಮೆರಿಕದ ಸಂಶೋಧಕರಾದ ಹಾರ್ವೆ ಅಲ್ಟರ್ ಹಾಗೂ ಚಾರ್ಲ್ಸ್ ರೈಸ್ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾದ ವಿಜ್ಞಾನಿಗಳಾಗಿದ್ದಾರೆ.
ಈ ಮೂವರು ವಿಜ್ಞಾನಿಗಳ ಸಂಶೋಧನೆಗಳು‘‘ಕೋಟ್ಯಂತರ ಜನರ ಪ್ರಾಣಗಳನ್ನು ಉಳಿಸಿದೆ’’ ಎಂದು ನೊಬೆಲ್ ಪ್ರಶಸ್ತಿ ಸಮಿತಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ನೊಬೆಲ್ ಪ್ರಶಸ್ತಿ ಸಮಿತಿಯ ಪ್ರಧಾನ ಕಾರ್ಯರ್ಶಿ ಥಾಮಸ್ ಪೆರ್ಲ್ಮನ್ ಅವರು ಸ್ಟಾಕ್‌ಹೋಮ್‌ನಲ್ಲಿ ವೈದ್ಯಕೀಯ ನೊಬೆಲ್ ಪುರಸೃತರ ಹೆಸರುಗಳನ್ನು ಘೋಷಿಸಿದರು.
‘‘ ಜಗತ್ತಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಈಗ ಈ ರೋಗವನ್ನು ಗುಣ ಪಡಿಸಬಹುದಾಗಿದ್ದು,ಜಗತ್ತಿನಿಂದ ಹೆಪಟೈಟಿಸ್‌ಸಿ ವೈರಸ್ ಅನ್ನು ಮೂಲೋತ್ಪಾಟನೆ ಮಾಡುವ ಬಗ್ಗೆ ಆಶಾವಾದವನ್ನು ಹುಟ್ಟುಹಾಕಿದೆ’’ ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ. ಆದಾಗ್ಯೂ ಈಗಲೂ ವಿಶ್ವದಾದ್ಯಂತ 7 ಕೋಟಿ ಮಂದಿ ಹೆಪಟೈಟಿಸ್ ಸಿ ವೈರಸ್‌ನಿಂದ ಬಾಧಿತರಾಗಿದ್ದರು.
1960ರ ದಶಕದಲ್ಲಿ, ರಕ್ತದಾನ ಪಡೆಯುವ ವ್ಯಕ್ತಿಗಳು ನಿಗೂಢವಾದ ವೈರಸ್‌ನಿಂದಾಗಿ ದೀರ್ಘಕಾಲದ ಹೆಪಟೈಟಿಸ್ (ಯಕೃತ್ತಿನ ಉರಿಯೂತ) ರೋಗಕ್ಕೆ ತುತ್ತಾಗುತ್ತಿದ್ದರು. ಈ ಮೂವರು ವಿಜ್ಞಾನಿಗಳು ಹೆಪಟೈಟಿಸ್ ಸಿ ವೈರಸ್ ಅನ್ನು ಪತ್ತೆಹಚ್ಚಿದ ಬಳಿಕ ಈ ರೋಗಕ್ಕೆ ಅತ್ಯಂತ ಪರಿಣಾಮಕಾರಿ ವೈರಾಣು ನಿರೋಧಕ ಔಷಧಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗುವ ಹೆಪಟೈಟಿಸ್ ಸಿ ವೈರಸ್ ಅತ್ಯಂತ ಮಾರಣಾಂತಿಕ ವಾಗಿದೆ. ಈ ವೈರಸ್ ಬಾಧೆಯುಂಟಾದಲ್ಲಿ ರೋಗಿಗಳು ಪ್ರಾಣ ಉಳಿಸಿಕೊಳ್ಳಲು ಯಕೃತ್ತಿನ ಕಸಿಯಂತಹ ದುಬಾರಿ ಶಸ್ತ್ರಕ್ರಿಯೆಯ ಮೊರೆಹೋಗಬೇಕಾಗುತ್ತದೆ.
ಹೆಪಟೈಟಿಸ್ ಎ ಮತ್ತು ಬಿ ವೈರಸ್ ಅನ್ನು 1960ರ ದಶಕದ ಮಧ್ಯದ ಅವಧಿಯಲ್ಲಿ ಪತ್ತೆ ಹಚ್ಚಲಾಗಿತ್ತು. ಪ್ರೊ. ಹಾರ್ವೆ ಅಲ್ಟರ್ ಅವರು 1972ರಲ್ಲಿ ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ರೋಗಿಗಳಲ್ಲಿ ರಕ್ತದಾನದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾಗ, ರಕ್ತ ಪಡೆದ ರೋಗಿಗಳು ಅಸ್ವಸ್ಥರಾಗುತ್ತಿದ್ದುದನ್ನು ಗಮನಿಸಿದರು. ಈ ನಿಗೂಢ ರೋಗಕ್ಕೆ ಹೆಪಟೈಟಿಸ್ ಸಿ ಎಂದು ಹೆಸರಿಡಲಾಗಿತ್ತು.
1989ರಲ್ಲಿ ಅಮೆರಿಕದ ಚಿರೊನ್ ಫಾರ್ಮಾಸ್ಯೂಟಿಕಲ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರು ವೈರಸ್‌ನ ವಂಶವಾಹಿಯನ್ನು ಪ್ರತ್ಯೇಕಿಸುವಲ್ಲಿ ಸಫಲರಾದರು ಹಾಗೂ ಆ ವೈರಸ್‌ಗೆ ಹೆಪಟೈಟಿಸ್ ಸಿ ಎಂದು ಹೆಸರಿಸಿದ್ದರು.
ಇನ್ನೋರ್ವ ನೊಬೆಲ್ ಪುರಸ್ಕೃತ ವಿಜ್ಞಾನಿ ಅಮೆರಿಕದ ಸೈಂಟ್ ಲೂಯಿಸ್‌ನಲ್ಲಿರುವ ವಾಶಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿದ್ದ ಸಂದರ್ಭ ಹೆಪಟೈಟಿಸ್ ಸಿ ವೈರಸ್ ಬಗ್ಗೆ ಮಹತ್ವದ ಸಂಶೋಧನೆ ನಡೆಸಿದ್ದರು.
1997ರಲ್ಲಿ ಹೆಪಟೈಟಿಸ್ ಸಿ ವೈರಸ್ ಅನ್ನು ಚಿಂಪಾಂಜಿಗಳ ಮೇಲೆ ಪ್ರಯೋಗಿಸಿ, ಹೆಪಟೈಟಿಸ್ ರೋಗ ಹರಡುವ ವಿಧಾನವನ್ನು ಬೆಳಕಿಗೆ ತಂದಿದ್ದರು.
ಪ್ರೊ. ಹಾರ್ವೆ ಅಲ್ಟರ್ ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ರಕ್ತವರ್ಗಾವಣೆ ವಿಭಾಗದ ಹಿರಿಯ ಸಂಶೋಧಕರಾಗಿದ್ದಾರೆ. ಡಾ. ಚಾರ್ಲ್ಸ್ ರೈಸ್ ಅವರು ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ವಿವಿಯಲ್ಲಿ ವೈಜ್ಞಾನಿಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ವೈದ್ಯಕೀಯ ನೊಬೆಲ್ ಪುರಸ್ಕೃತ ಇನ್ನೋರ್ವ ವಿಜ್ಞಾನಿ ಹೌಟನ್ ಅವರು ಮೂಲತಃ ಬ್ರಿಟಿಶ್ ಸಂಜಾತರಾದರೂ, ಪ್ರಸಕ್ತ ಕೆನಡಾದ ವೈರಾಣುಶಾಸ್ತ್ರ ಕುರಿತ ಸಂಶೋಧನಾ ಪೀಠದ ವರಿಷ್ಠರಾಗಿದ್ದಾರೆ. ಅಲ್ಬರ್ಟಾ ವಿವಿಯಲ್ಲಿ ವೈರಾಣುಶಾಸ್ತ್ರದ ಪೊಫೆಸರ್ ಆಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ನೊಬೆಲ್ ಪುರಸ್ಕಾರವು 10 ದಶಲಕ್ಷ ಸ್ವೀಡಿಶ್ ಕ್ರೊನೊರ್ (ಸುಮಾರು 8.22 ಕೋಟಿ ರೂ.) ಹಾಗೂ ಚಿನ್ನದ ಪದಕವನ್ನು ಒಳಗೊಂಡಿದೆ.
ಭೌತಶಾಸ್ತ್ರ,ರಾಸಾಯನಿಕ ಶಾಸ್ತ್ರ,ಸಾಹಿತ್ಯ, ಶಾಂತಿ ಹಾಗೂ ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಸಾಧನೆಗೆ ನೀಡುವ ನೊಬೆಲ್ ಪುರಸ್ಕಾರಗಳನ್ನು ಅಕ್ಟೋಬರ್ 12ರೊಳಗೆ ಘೋಷಿಸಲಾಗುವುದು.