ಅನಧಿಕೃತ ಬ್ಯಾನರ್ ವಿರುದ್ಧ ಶೇಖರ್ ಲಾಯಿಲರಿಂದ ಏಕಾಂಗಿ ಧರಣಿ

Update: 2020-10-05 16:23 GMT

ಬೆಳ್ತಂಗಡಿ : ತಾಲೂಕಿನಾದ್ಯಂತ ಗ್ರಾಮ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಬ್ಯಾನರ್‌ಗಳು ರಾರಾಜಿಸುತ್ತಿದ್ದು ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ತಾ.ಪಂ ಕಚೇರಿ ಬಳಿ ದಲಿತ ಹಕ್ಕುಗಳ ಸಮಿತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶೇಖರ್ ಲಾಯಿಲ ಇವರು ಸೋಮವಾರ ಏಕಾಂಗಿ ಧರಣಿ ಸತ್ಯಾಗ್ರಹ ನಡೆಸಿದರು.

ಕಳೆದ ಎರಡು ವರ್ಷದಿಂದ ಅಕ್ರಮ ಬ್ಯಾನರ್ ಗಳನ್ನು ತಾಲೂಕಿನಾಧ್ಯಂತ ಕಾನೂನು ಬಾಹಿರವಾಗಿ ಅಳವಡಿಸಲಾಗುತ್ತಿದೆ.  ಇದರಿಂದಾಗಿ ಗ್ರಾಮ ಪಂಚಾಯತುಗಳಿಗೂ ತೆರಿಗೆ ವಂಚನೆಯಾಗುತ್ತಿದೆ. ಅದನ್ನು ತೆರವುಗೊಳಿಸುವಂತೆ  ಹಾಗೂ ಬ್ಯಾನರ್ ಹಾಕುವವರ ವಿರುದ್ದ ಕ್ರಮ ಕೈಗೊಳ್ಳುವಂತೆ  ಹಲವು ಬಾರಿ ತಾ.ಪಂ ಕಾರ್ಯನಿರ್ಹಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆ ಯಲ್ಲಿ ಅವರು ಧರಣಿಗೆ ಮುಂದಾಗಿದ್ದರು.

ಧರಣಿ ನಿರತ ಶೇಖರ್ ಅವರನ್ನು  ದೂರವಾಣಿ ಮೂಲಕ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಅವರು ಸಂಪರ್ಕಿಸಿದರು. ತಾ.ಪಂ ಅಧಿಕಾರಿಗಳೂ ಅವರೊಂದಿಗೆ ಮಾತುಕತೆ ನಡೆಸಿದರು ಕೊನೆಗೂ ತಾ.ಪಂ ಕಚೇರಿಯಿಂದ ಲಿಖಿತ ಮಾಹಿತಿ ನೀಡಲಾಗಿ, ಮುಂದಿನ‌ ಅ. 8 ಗುರುವಾರದೊಳಗಾಗಿ ಎಲ್ಲ  ಕಾನೂನು ಬಾಹಿರ ಬ್ಯಾನರ್‌ಗಳನ್ನು ತೆರವುಗೊಳಿಸುವುದಾಗಿ ಪತ್ರ ನೀಡಿದ ಬಳಿಕ ಅವರು ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಟ್ಟರು.

ಮಾಧ್ಯಮದವರೊಂದಿಗೆ ಮಾತನಾಡಿದ ಶೇಖರ್ ಅವರು ಅರೋಪಿಸಿದಂತೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕಳೆದ ಎರಡೂವರೆ ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಬ್ಯಾನರ್‌ಗಳನ್ನು  ಅಳವಡಿಸ ಲಾಗಿದೆ. ಇದಕ್ಕೆ ಪಂಚಾಯತ್ ಗೆ ಸಲ್ಲಬೇಕಾದ ತೆರಿಗೆಯನ್ನೂ ವಂಚಿಸಲಾಗಿದೆ. ಈ‌ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾರೂ ಕ್ರಮ ಕೈಗೊಂಡಿಲ್ಲ. ಕೆಲವರು ಪಿಡಿಒಗಳು ಇಂತಹ ಅಕ್ರಮ ಬ್ಯಾನರ್ ಗಳು ತೆರವು ಗೊಳಿಸುವ ಬದಲು ಅವರಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಅಕ್ರಮ ಬ್ಯಾನರ್ ಗಳನ್ನು ತೆರವುಗೊಳಿಸದ ಅಧಿಕಾರಿಗಳ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂದು ಶೇಖರ್ ಒತ್ತಾಯಿಸಿದರು.

ಕಾಂಗ್ರೆಸ್ ನಿಯೋಗ ಭೇಟಿ; ಬೆಂಬಲ

ಪ್ರತಿಭಟನೆಗೆ ಬೆಂಬಲ ನೀಡಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ವಸಂತ ಬಂಗೇರ ಅವರ ನೇತೃತ್ವದಲ್ಲಿ ಬೆಳ್ತಂಗಡಿ ಬ್ಲಾಕ್ ಸಮಿತಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ. ಎಪಿಎಂಸಿ ಅಧ್ಯಕ್ಷ ಚಿದಾನಂದ, ಪಕ್ಷದ ಪ್ರಮುಖರಾದ ಪ್ರಮೋಹರ್ ಕುಮಾರ್ ಇಳಂತಿಲ, ಕಿಶೋರ್ ಕುಮಾರ್ ವಳಂಬ್ರ,  ಸಿಪಿಐಎಂ‌  ತಾಲೂಕು ಕಾರ್ಯದರ್ಶಿ ಶಿವಕುಮಾರ್ ಮುಖಂಡರುಗಳಾದ ನ್ಯಾಯವಾದಿ ಸುಕನ್ಯಾ ಹರಿದಾಸ್, ಸುಜಿತ್ ಉಜಿರೆ ಮೊದಲಾದವರು ಭೇಟಿ ನೀಡಿ ಬೆಂಬಲ ಸೂಚಿಸಿದರು.

ಈ‌ ಸಂದರ್ಭ ಸ್ಥಳದಿಂದಲೇ ಜಿಲ್ಲಾಧಿಕಾರಿ ಜೊತೆ‌ ಮಾಜಿ‌ ಶಾಸಕ‌ ವಸಂತ ಬಂಗೇರ ಮಾತುಕತೆ ನಡೆಸಿದರು. ತಕ್ಷಣ ಈ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಬೇಕಾಗಿ ಆಗ್ರಹಿಸಿದರು. ಬಳಿಕ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ವಸಂತ ಬಂಗೇರ, ಅನುಮತಿ‌ ಪಡೆದ‌ ಬ್ಯಾನರ್‌ಗಳನ್ನೇ 15 ದಿನಗಳಲ್ಲಿ ತೆರವುಗೊಳಿಸಬೇಕಾದ‌ ನಿಯಮ‌ವಿದೆ. ಅದರಲ್ಲೂ ತಾಲೂಕಿನಲ್ಲಿ ಕೆಲವೊಂದು ಬ್ಯಾನರ್‌ಗಳು ವರ್ಷಗಟ್ಟಳೆ ಇದೆ. ನ್ಯಾಯವಾದಿಯಾಗಿರುವ ಶಾಸಕರೇ ಕಾನೂನು ಉಲ್ಲಂಘಿಸಿ ಅನುಮತಿ ಪಡೆಯದೇ ಕೆಲವೆಡೆ ಬ್ಯಾನರ್ ಹಾಕಿದ್ದಾರೆ. ತಾಲೂಕಿನ  ಅಧಿಕಾರಿಗಳು ಕಾನೂನಿಗರ ಗೌರವ ನೀಡುತ್ತಿಲ್ಲ. ಈ‌ ಅಗೌರವಕ್ಕೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು‌ ಎಂದು ಡಿಸಿ ಸಹಿತ ಪ್ರಮುಖರಿಗೆ ಕಾಂಗ್ರೆಸ್ ಪಕ್ಷದಿಂದ ಲಿಖಿತ ದೂರು ಸಲ್ಲಿಸಲಾಗುವುದು ಎಂದರು.‌

ಅ. 9 ರಿಂದ ಅನಿರ್ದಿಷ್ಟಾವಧಿ ಧರಣಿ

ಇಂದು ನಡೆಸಿದ ಧರಣಿಯ ಭಾಗವಾಗಿ ಅಧಿಕಾರಿಗಳು ಸ್ಪಂದಿಸಿ ಅ. 8 ರೊಳಗಾಗಿ  ಎಲ್ಲ ಅಕ್ರಮ ಬ್ಯಾನರ್ ಗಳನ್ನು ತೆರವು ಮಾಡುವುದಾಗಿ ಪಿಡಿಒ ಗಳಿಗೆ ನಿರ್ದೇಶನ‌ ನೀಡಿ  ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ಆದೇಶಿಸಿದ್ದಾರೆ. ಹಾಗೂ ಈ ಬಗ್ಗೆ ಲಿಖಿತ ಭರವಸೆ ನೀಡಿದ್ದಾರೆ ಇದು ಜಾರಿಯಾಗದೇ ಇದ್ದಲ್ಲಿ ಅ.9 ರಿಂದ ಮತ್ತೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಶೇಖರ್ ಲಾಯಿಲ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News