ಭಟ್ಕಳ : ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Update: 2020-10-05 16:41 GMT

ಭಟ್ಕಳ : ಕೇಂದ್ರ ಸರ್ಕಾರವು  ಪ್ರಸ್ತಾಪಿತ ವಿದ್ಯುತ್ ಕಾಯ್ದೆ-2003ನ್ನು ತಿದ್ದುಪಡಿ ಮಾಡುತ್ತಿರುವುದನ್ನು ವಿರೋಧಿಸಿ ಎಐಟಿಯುಸಿ ಹಾಗೂ ಅಖಿಲ ಭಾರತ ವಿದ್ಯುತ್ ನೌಕರರ ಫೆಡರೇಶನ್ ಹಾಗೂ ಹೆಸ್ಕಾಂ ಗುತ್ತಿಗೆ ನೌಕರರ ಸಂಘದ ಸಹಯೋಗದಲ್ಲಿ ಸೋಮವಾರ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಭಟ್ಕಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮಂಜುನಾಥ,  ಹಿಂದೆ ಸರಕಾರ ಜನಪರವಾಗಿ ಹಾಗೂ ರೈತರಿಗೆ, ಜನಸಾಮಾನ್ಯರಿಗೆ ಅನುಕೂಲವಾಗಲು ಹಲವು ಮಹತ್ವಕಾಂಕ್ಷೆಯ ಯೋಜನೆ ಜಾರಿಗೆ ತಂದಿತ್ತು. ಪ್ರಸ್ತುತ ಕೇಂದ್ರ ಸರಕಾರ ವಿದ್ಯುತ್ ಕಂಪೆನಿಗಳನ್ನು ಖಾಸಗಿಯವರಿಗೆ ನೀಡುವುದರಿಂದ ರೈತರಿಗೆ ಉಚಿತ ನೀರಾವರಿ ವಿದ್ಯುತ್ ಸೇರಿ ಹಲವು ಯೋಜನೆ ಕೈಬಿಡಲಿದೆ. ಹೀಗಾಗಿ ಕೇಂದ್ರ ಸರಕಾರ ಈ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಅವರು, ಹೀಗೆ  ಮಾಡದಿದ್ದರೆ ಮುಂದಿನಗಳಲ್ಲಿ ಹೋರಾಟ ಅನಿವಾರ್ಯವಾಗುವುದು ಎಂದು ಎಚ್ಚರಿಸಿದರು.

ಸರಕಾರಿ ಸ್ವಾಮ್ಯದಲ್ಲಿದ್ದ ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣ ಕಾರ್ಯಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು, ಸರ್ಕಾರದ ಸ್ವಾಮ್ಯದಲ್ಲಿದ್ದಂತಹ ಉತ್ಪಾದನೆ, ಪ್ರಸರಣೆ ಹಾಗೂ ಸರಬರಾಜು ಕಾರ್ಯಗಳನ್ನು ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ವಿದ್ಯುತ್ ಪ್ರಸರಣವನ್ನು ಖಾಸಗಿ ಕಂಪನಿಗಳಿಗೆ ವಹಿಸಿದ್ದರಿಂದ ವಿದ್ಯುತ್ ಶುಲ್ಕ ಹೆಚ್ಚಾಗಿದೆ. ಜನಸಾಮಾನ್ಯರ ಮೇಲೆ ವಿಪರೀತ ಹೊರೆ ಬಿದ್ದಿದೆ. ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳು ಕಡಿತಗೊಳ್ಳುವ ಸಾಧ್ಯತೆ ಇರುತ್ತದೆ. ಅನೇಕ ಕಾರ್ಮಿಕರು ಕೆಲಸ ಕಳೆದುಕೊಳ್ಳ ಸಾಧ್ಯತೆಯಿದೆ, ಜನವಿರೋಧಿ, ನೌಕರ ವಿರೋಧಿ ವಿದ್ಯುತ್ ಬಿಲ್ 2020ನ್ನೂ ಸಹ ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರಾಥಮಿಕ ಸಮಿತಿ ಅಧ್ಯಕ್ಷ ರಾಮ ಪೂಜಾರಿ ರವರು, ಸಹಾಯಕ ಅಭಿಯಂತರು ಸಂಪತ್ ಕುಮಾರ್, ಶಿವಾನಂದ ನಾಯ್ಕ, ಶ್ರೀಕಾಂತ್, ರಮೇಶ ಮೇಸ್ತ, ಕಿರಿಯ ಅಭಿಯಂತರ ಗೌತಮ್ ಹಾಗೂ ನೌಕಾರಾದ ವಾಸು ನಾಯ್ಕ, ವೆಂಕಟೇಶ್ ಗೊಂಡ್ ಖಾಸಗೀಕರಣದ ಸಿಬ್ಬಂದಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಆಗುವ ತೊಂದರೆಗಳನ್ನು ವಿವರಿಸಿ ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಒಂದಾಗಿ ಹೋರಾಡೋಣ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News