ಗಲ್ಫ್ ಮೆಡಿಕಲ್ ವಿವಿ: ‘ವೈಟ್‌ಕೋಟ್’ ಕಾರ್ಯಕ್ರಮ

Update: 2020-10-05 16:58 GMT

ಅಜ್ಮಾನ್, ಅ.5: ತುಂಬೆ ಸಮೂಹ ಸಂಸ್ಥೆಯ ಅಧೀನದ ಗಲ್ಫ್ ಮೆಡಿಕಲ್ ವಿವಿ(ಜಿಎಂಯು)ಗೆ ಸೇರಿದ 6 ಕಾಲೇಜುಗಳ ಹೊಸ ವಿದ್ಯಾರ್ಥಿಗಳನ್ನು ಆರೋಗ್ಯ ಸೇವೆ ವೃತ್ತಿಯ ಅಧ್ಯಯನಕ್ಕೆ ಸ್ವಾಗತಿಸುವ ‘ವೈಟ್‌ಕೋಟ್’ ಕಾರ್ಯಕ್ರಮ ವಿವಿಯಲ್ಲಿ ಅ. 1ರಂದು ನಡೆಯಿತು.

ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಜಿಎಂಯು ಸ್ಥಾಪಕ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಮುಖ್ಯ ಅತಿಥಿಯಾಗಿದ್ದರು. ಜಿಎಂಯು ಕುಲಾಧಿಪತಿ ಪ್ರೊ. ಹೊಸ್ಸಾಂ ಹಮ್ದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಂಬೆ ಸಮೂಹ ಸಂಸ್ಥೆಯ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯಿದ್ದೀನ್ ತುಂಬೆ, ಉಪಕುಲಪತಿಗಳು, ವಿವಿಯ ಡೀನ್ ಮತ್ತಿತರರು ಉಪಸ್ಥಿತರಿದ್ದರು.

ಉಪಕುಲಪತಿ (ಶಿಕ್ಷಣ) ಪ್ರೊ. ಮಂದಾ ವೆಂಕಟ್ರಮಣ ಸ್ವಾಗತಿಸಿ, ಈ ವರ್ಷ 50 ವಿವಿಧ ರಾಷ್ಟ್ರಗಳ 510 ಹೊಸ ವಿದ್ಯಾರ್ಥಿಗಳು ವಿವಿಗೆ ಸೇರ್ಪಡೆಗೊಂಡಿ ದ್ದಾರೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರೊ. ಹೊಸ್ಸಾಂ ಹಮ್ದಿ, ಜಾಗತಿಕ ಪಿಡುಗಾಗಿರುವ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆನ್‌ಲೈನ್ ಮೂಲಕ ನಡೆಯುತ್ತಿದೆ. ಭವಿಷ್ಯದ ಆರೋಗ್ಯ ವೃತ್ತಿನಿರತರು ಸಂವಹನ, ಸಾಂಘಿಕ ಕೆಲಸ, ನೈತಿಕತೆ ಮತ್ತು ವಿಶ್ವಾಸಾರ್ಹತೆ ಬೆಳೆಸಿಕೊಳ್ಳಲು ಆದ್ಯತೆ ನೀಡಬೇಕಾಗಿದೆ ಎಂದರು.

ಸಂವಹನ, ಸಂಚಾರ, ರೋಗಿಗಳ ಆರೈಕೆ, ತಂತ್ರಜ್ಞಾನದ ಬಳಕೆ ಇತ್ಯಾದಿ ವಿಷಯಗಳಲ್ಲಿ ಜಗತ್ತಿನಾದ್ಯಂತ ಕ್ಷಿಪ್ರ ಬದಲಾವಣೆಯಾಗುತ್ತಿದೆ. ಆದರೆ ಬದಲಾಗದೆ ಉಳಿದಿರುವ ಪ್ರಮುಖ ಗುಣವೆಂದರೆ ಅದು ಮನುಷ್ಯರ ನಡುವಿನ ಸಂವಹನ. ರೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವೆ ಒದಗಿಸುವವರು, ವೈದ್ಯಕೀಯ ಶಿಕ್ಷಕರು ಎಲ್ಲರೂ ಮಾನವರು. ಯಾವ ರೀತಿ ಸಂವಹನ, ಅನುಭೂತಿ, ಸಂಪರ್ಕ ನಡೆಸಬೇಕು ಎಂಬುದು ಆರೋಗ್ಯ ವೃತ್ತಿನಿರತರ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಡಾ ತುಂಬೆ ಮೊಯಿದ್ದೀನ್ ಸ್ವಾಗತಿಸಿದರು. ಕಾರ್ಯಕ್ರಮದ ಅಂಗವಾಗಿ ಆಯ್ದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ವೈಟ್‌ಕೋಟ್ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News