×
Ad

ಸೆಂಟ್ರಲ್ ಮಾರುಕಟ್ಟೆ ಬಗ್ಗೆ ತಪ್ಪು ನಡೆ, ಮನಪಾಕ್ಕೆ ಆದಾಯ ಖೋತ- ವ್ಯಾಪಾರಿಗಳು ಬೀದಿಗೆ: ಕಾಂಗ್ರೆಸ್ ಆರೋಪ

Update: 2020-10-06 14:48 IST

ಮಂಗಳೂರು, ಅ. 6: ಸೆಂಟ್ರಲ್ ಮಾರುಕಟ್ಟೆಗೆ ಸಂಬಂಧಿಸಿ ಕೊರೋನ ನೆಪದಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ತಪ್ಪು ನಿರ್ಧಾರದಿಂದ ಮಂಗಳೂರು ಮಹಾನಗರ ಪಾಲಿಕೆಗೆ ಬರುತ್ತಿದ್ದ ಆದಾಯ ನಿಂತು ಹೋಗಿದೆ. ಮಾತ್ರವಲ್ಲದೆ, ಅಲ್ಲಿದ್ದ 450ಕ್ಕೂ ಅಧಿಕ ವ್ಯಾಪಾರಸ್ಥರು ಹಾಗೂ ಕೇಂದ್ರ ಮಾರುಕಟ್ಟೆಯಲ್ಲಿ ಕೂಲಿ ಸೇರಿದಂತೆ ನಾನಾ ರೀತಿಯಲ್ಲಿ ಅವಲಂಬಿಸಿಕೊಂಡಿದ್ದ ಸುಮಾರು 5000 ಮಂದಿ ಬೀದಿ ಪಾಲಾಗಿದ್ದಾರೆ ಎಂದು ಮನಪಾ ವಿಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಕೊರೋನ ನೆಪವೊಡ್ಡಿ ಯಾವುದೇ ಪೂರ್ವ ತಯಾರಿ ಇಲ್ಲದೆ, ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸೆಂಟ್ರಲ್ ಮಾರುಕಟ್ಟೆಯನ್ನು ಬಂದ್ ಮಾಡಲಾಯಿತು. ಅಲ್ಲಿದ್ದ ವ್ಯಾಪಾರಿ ಗಳನ್ನು ಯಾವುದೇ ಸಮರ್ಪಕ ವ್ಯವಸ್ಥೆ ಕಲ್ಪಿಸದೆ ಎಪಿಎಂಸಿಗೆ ಸ್ಥಳಾಂತರಿಸಲಾಯಿತು. ಇದರಿಂದಾಗಿ ಹಿಂದೆ ಮನಪಾಕ್ಕೆ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳಿಂದ ಬರುತ್ತಿದ್ದ ಸುಮಾರು 1 ಕೋಟಿರೂ.ಗಳ ಆದಾು ನಿಂತು ಹೋಗಿದೆ ಎಂದು ಹೇಳಿದರು.

ರಿಟೇಲ್ ವ್ಯಾಪಾರಿಗಳಿಗಾಗಿ ತಾತ್ಕಾಲಿಕ ವ್ಯವಸ್ಥೆಗಾಗಿ ನಗರದ ಪುರಭವನದ ಎದುರು ಕಾನೂನು ಬಾಹಿರವಾಗಿ ಫುಟ್‌ಪಾತ್‌ನಲ್ಲಿ 4.84 ಲಕ್ಷ ರೂ. ಅಂದಾಜಿನಲ್ಲಿ ಶೀಟ್‌ಗಳನ್ನು ಅಳವಡಿಸಿ ಫುಟ್‌ಪಾತ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅದು ಅಲ್ಲಿ ತರಕಾರಿ, ಹಣ್ಣು ಹಂಪಲು ವ್ಯಾಪಾರಿಗಳ ವ್ಯಾಪಾರಕ್ಕೆ ಸೂಕ್ತವಾಗಿಲ್ಲ. ಅಲ್ಲಿ ಸದ್ಯ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಪಾಲಿಕೆ ವತಿಯಿಂದ ಆ ತಾತ್ಕಾಲಿಕ ವ್ಯವಸ್ಥೆಗಾಗಿ ಬಾಡಿಗೆ ಪಾವತಿಸಲಾಗುತ್ತಿದೆ. ಇದು ಜಿಲ್ಲಾಡಳಿತದ ವೈಫಲ್ಯ ಎಂದು ಅಬ್ದುಲ್ ರವೂಫ್ ಆರೋಪಿಸಿದರು.

ಮನಪಾದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಳಕೆ, ಕದ್ರಿ, ಕಂಕನಾಡಿ, ಬಿಜೈ, ಕಾವೂರು, ಉರ್ವಾ ಮಾರುಕಟ್ಟೆ ರಚನೆ ಸಂದರ್ಭ ವ್ಯಾಪಾರಿ ಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಸೆಂಟ್ರಲ್ ಮಾರುಕಟ್ಟೆ ವಿಚಾರದಲ್ಲಿ ಪ್ರಸಕ್ತ ಬಿಜೆಪಿ ಆಡಳಿತ ವ್ಯಾಪಾರಿಗಳನ್ನು ಹಾಗೂ ಅಲ್ಲಿನ ವ್ಯಾಪಾರವನ್ನು ನಂಬಿದ್ದ ಕುಟುಂಬಗಳನ್ನು ಬೀದಿ ಪಾಲಾಗಿಸಿದೆ ಎಂದವರು ಹೇಳಿದರು.

ಮಾಜಿ ಮೇಯರ್ ಹಾಗೂ ಹಿರಿಯ ಸದಸ್ಯರಾದ ಶಶಿಧರ ಹೆಗ್ಡೆ ಮಾತನಾಡಿ, ಸೆಂಟ್ರಲ್ ಮಾರುಕಟ್ಟೆಯನ್ನು ಸ್ಮಾರ್ಟ್ ಸಿಟಿಯಡಿ ಹೊಸತಾಗಿ ನಿರ್ಮಿಸುವುದು ಬಹುದೊಡ್ಡ ಯೋಜನೆ. ಆದರೆ ಮುಂದಾಲೋಚನೆ ಇಲ್ಲದೆ ಕೈಗೊಂಡ ನಿರ್ಧಾರದಿಂದಾಗಿ ಪಾಲಿಕೆಗೆ ಆದಾಯ ನಷ್ಟವಾಗುತ್ತಿದೆ. ಈ ಕುರಿತು ಪಾಲಿಕೆ ಆಡಳಿತ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಲ್ಯಾನ್ಸಿ ಲಾಟ್ ಪಿಂಟೋ, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್, ಸಂಶುದ್ದೀನ್, ಭಾಸ್ಕರ ಕೆ., ಅನಿಲ್ ಕುಮಾರ್, ಕೇಶವ, ಝೀನತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News