×
Ad

ದುಬೈನಲ್ಲಿ ಬ್ಲಡ್ ಡೋನರ್ಸ್‌ನ 250ನೆ ಶಿಬಿರ

Update: 2020-10-06 15:33 IST

ಮಂಗಳೂರು, ಅ.6: ಬ್ಲಡ್ ಡೋನರ್ಸ್ ಮಂಗಳೂರು ಇದರ 250ನೇ ರಕ್ತದಾನ ಶಿಬಿರವು ದುಬೈನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ರಝಾಕ್ ಸಾಲ್ಮರ ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ತದಾನ ಶಿಬಿರಗಳ ಆಯೋಜನೆಯ ಜೊತೆಗೆ ‘ಸೂರಿಲ್ಲದವರಿಗೆ ಸೂರು’ ಎಂಬ ಯೋಜನೆಯಡಿಯಲ್ಲಿ ಮುಡಿಪು ಪರಿಸರದಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಾಗಿದೆ. ಕಳೆದ ವರ್ಷ ಉಂಟಾದ ನೆರೆ ಸಂದರ್ಭದಲ್ಲಿ ಉತ್ತರ ಕರ್ನಾಟಕ, ಬೆಳಗಾವಿ, ದ.ಕ. ಸೇರಿದಂತೆ ವಿವಿಧ ಕಡೆಗಳಲ್ಲಿ ಮೂಲಭೂತ ಸೌಕರ್ಯದ ನೆರವು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ತುರ್ತು ಔಷಧ ಪೂರೈಕೆ, ಹೆಲ್ಫ್ ಡೆಸ್ಕ್‌ಗಳ ಮುಖೇನ ಸಾರ್ವಜನಿಕರಿಗೆ ಆರೋಗ್ಯ ಮಾಹಿತಿ ಹಾಗೂ ಅರ್ಹರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ. ಇದೀಗ ಪ್ಲಾಸ್ಮಾ ಥೆರಪಿಯಲ್ಲಿಯೂ ಎಲ್ಲಾ ಆಸ್ಪತ್ರೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಪ್ಲಾಸ್ಮಾ ದಾನಿಗಳ ಸಂಗ್ರಹದಲ್ಲಿಯೂ ಮುತುವರ್ಜಿ ವಹಿಸಲಾಗುತ್ತಿದೆ ಎಂದರು.

ರಕ್ತದಾನ ಶಿಬಿರವನ್ನು ಕೇವಲ ದ.ಕ. ಜಿಲ್ಲೆಗೆ ಮಾತ್ರ ಸೀಮಿತಗೊಳಿಸದೆ ಕೊಡಗು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಮಾತ್ರವಲ್ಲದೆ ಕೊಲ್ಲಿ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಬಹರೈನ್, ಓಮನ್‌ನಲ್ಲಿಯೂ ಸಂಸ್ಥೆಯ ಅನಿವಾಸಿ ಕಾರ್ಯನಿರ್ವಾಹಕರ ಸಹಕಾರದಿಂದ ರೋಗಿಗಳಿಗೆ ರಕ್ತಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಪಯಾಝ್, ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ, ಕಾರ್ಯನಿರ್ವಾಹಕರಾದ ನವಾಝ್ ಕಲ್ಲರಕೋಡಿ, ದಾವೂದ್ ಬಜಾಲ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News