×
Ad

ಮೊಮ್ಮಗಳಿಂದಲೇ ವಂಚನೆಗೊಳಗಾದ ಸಾಂತೂರಿನ ಸೆಲೆಸ್ಟಿನ್ ಅಂದ್ರಾದೆ

Update: 2020-10-06 19:41 IST

ಉಡುಪಿ, ಅ.6: ತನ್ನ ಮೊಮ್ಮಗಳಿಂದಲೇ ವಂಚನೆಗೊಳಗಾಗಿ ಆಘಾತ ಗೊಂಡು ಪಾರ್ಶ್ವವಾಯುವಿಗೊಳಗಾಗಿರುವ ಉಡುಪಿ ಜಿಲ್ಲೆಯ ಸಾಂತೂರು ಗ್ರಾಮದ ಸೆಲೆಸ್ಟಿನ್ ಅಂದ್ರಾದೆ(84) ಅವರಿಗೆ ಪೂರ್ಣ ಪ್ರಮಾಣದ ಕಾನೂನು ನೆರವು ನೀಡಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನ ಮುಂದಾಗಿದೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಬಾಗ್ ಈ ವಿಷಯ ತಿಳಿಸಿದರು. ಸ್ವತಃ ದುಡಿದು ಗಳಿಸಿದ ಜಮೀನು ಹಾಗೂ ಮನೆಯನ್ನು ಮೊಮ್ಮಗಳು ರೋಶನಿ ಲಪಟಾಯಿಸಿದ್ದು, ಕೇವಲ ಮೂರೇ ತಿಂಗಳ ಅವಧಿ ಯಲ್ಲಿ ಮೋಸದಿಂದ ಅಜ್ಜಿಯಿಂದ ಆಸ್ತಿಯನ್ನು ತಂದೆ ಹೆಸರಿಗೂ, ಅಲ್ಲಿಂದ ಯಾರಿಗೂ ತಿಳಿಯದಂತೆ ತನ್ನ ಹೆಸರಿಗೂ ಮಾಡಿಕೊಂಡಿದ್ದಾಳೆ ಎಂದು ಅವರು ಆರೆಪಿಸಿದರು.

ಕೃಷಿ ಕೂಲಿ ಮಾಡಿ ಗಳಿಸಿದ ಹಣದಿಂದ 1967ರಲ್ಲಿ ಸೆಲೆಸ್ಟಿನ್ ಎರಡು ಎಕರೆ ಜಮೀನನ್ನು ಖರೀದಿಸಿದ್ದರು. ಕೃಷಿ ಆದಾಯದಿಂದಲೇ ನಾಲ್ಕೂ ಮಂದಿ ಮಕ್ಕಳನ್ನು ಸಾಕಿ ಬೆಳೆಸಿದರು. ಕೆಲ ವರ್ಷಗಳ ಹಿಂದೆ ಗಂಡ ಗ್ರೆಗರಿ ತೀರಿ ಹೋದಾಗ ಮುಂಬೈಯಲ್ಲಿ ದುಡಿಯುತ್ತಿದ್ದ ಹಿರಿಯ ಮಗ ರೋನಾಲ್ಡ್ ಸಂಸಾರವನ್ನು ಸೆಲೆಸ್ಟಿನ್ ಮನೆಗೆ ಕರೆಸಿಕೊಂಡರು. ತನ್ನ ಜೀವಿತಾವಧಿಯ ನಂತರ ಮಕ್ಕಳ ನಡುವೆ ಗೊಂದಲ ಉಂಟಾಗ ಬಾರದೆಂದು ತನ್ನ ಆಸ್ತಿಯಲ್ಲಿ ನಾಲ್ಕು ಮಕ್ಕಳಿಗೂ ಸಮಪಾಲು ನೀಡಿ ವೀಲುನಾಮೆ ಬರೆಯಿಸಿದರು. ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿದ್ದರು.

ಕೃಷಿ ಸಮೀಕ್ಷೆಯಿಂದ ಮೋಸ ಬಯಲು

20 ದಿನಗಳ ಹಿಂದೆ ಪಂಚಾಯತ್ ಅಧಿಕಾರಿಗಳು ಸರಕಾರಿ ಯೋಜನೆಗೆ ಸಂಬಂಧಿಸಿ ಕೃಷಿ ಸಮೀಕ್ಷೆಗೆ ಬಂದಾಗ ಇವರ ಮನೆ ಹಾಗೂ ಜಮೀನು ಹಿರಿಯ ಮಗ ರೋನಾಲ್ಡ್‌ರ ಮಗಳು ರೋಶನಿ ಹೆಸರಿನಲ್ಲಿರುವುದು ಬೆಳಕಿಗೆ ಬಂತು. ಇದರಿಂದ ಆಘಾತಗೊಂಡ ಸೆಲೆಸ್ಟಿನ್ ಪಾರ್ಶ್ವ ವಾಯು ಪೀಡಿತರಾಗಿ ಹಾಸಿಗೆ ಹಿಡಿದರು ಎಂದು ಡಾ.ರವೀಂದ್ರನಾಥ್ ಶಾನುಭಾಗ್ ತಿಳಿಸಿದರು.

10 ವರ್ಷಗಳ ಹಿಂದೆ ಮದುವೆಯಾಗಿ ಗಂಡನ ಮನೆಗೆ ಹೋದ ರೋಶನಿ, ಆಗಾಗ ಅಜ್ಜಿಯ ಮನೆಗೆ ಬಂದು ಹೋಗುತ್ತಿದ್ದಳು. ಕೆಲ ಸಮಯ ದಿಂದ ಅಜ್ಜಿ ಮನೆಗೆ ಬಾರದೆ ನಾಪತ್ತೆಯಾಗಿದ್ದ ರೋಶನಿಯ ಮೊಬೈಲ್ ಕೂಡ ಸಂಪೂರ್ಣ ಸ್ತಬ್ಧಗೊಂಡಿತ್ತು. ಈ ಮಧ್ಯೆ ಆಸ್ತಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳ ಪ್ರತಿಗಳನ್ನು ಸಬ್‌ರಿಜಿಸ್ಟ್ರಾರ್ ಕಚೇರಿಗಳಿಂದ ಪಡೆದು ಪರಿಶೀಲಿಸಿದಾಗ ಎಲ್ಲದರಲ್ಲೂ ರೋಶನಿ ಹೆಸರು ಇರುವುದು ಕಂಡುಬಂತು.

2019ರ ಜನವರಿ ತಿಂಗಳಲ್ಲಿ ತಂದೆ ರೋನಾಲ್ಡ್ ಹಾಗೂ ಅಜ್ಜಿಯನ್ನು ಮೋಸದಿಂದ ಮೂಲ್ಕಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋದ ರೋಶಿನಿ, ಕೆಲವು ಕಾಗದ ಪತ್ರಗಳಿಗೆ ಹೆಬ್ಬೆಟ್ಟು ಗುರುತು ಹಾಗೂ ಸಹಿಗಳನ್ನು ಪಡೆದಿದ್ದಳು. ಬಳಿಕ ಮೂರೇ ತಿಂಗಳಲ್ಲಿ ತಂದೆಯನ್ನು ಮತ್ತೆ ಅದೇ ಕಚೇರಿಗೆ ಕರೆದೊಯ್ದು ಸಹಿಗಳನ್ನು ಪಡೆದಿದ್ದಳು. ಹೀಗೆ ಈಕೆ ಮೊದಲು ಅಜ್ಜಿಯಿಂದ ಆಸ್ತಿಯನ್ನು ತಂದೆ ಹೆಸರಿಗೆ, ನಂತರ ತಂದೆಯ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾಳೆ ಎಂದು ಅವರು ದೂರಿದ್ದಾರೆ.

ಹಿರಿಯ ನಾಗರಿಕರ ಕೋರ್ಟ್‌ಗೆ ದೂರು

ಈ ಕುಟುಂಬದ ಹಿತೈಷಿ, ನಿವೃತ್ತ ಸೈನಿಕ ಲಾರೆನ್ಸ್ ಡಿಸೋಜ ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಪ್ರತಿಷ್ಠಾನಕ್ಕೆ ನೀಡಿ ದ್ದಾರೆ. ಈಗಾಗಲೇ ಪಂಚಾಯತ್ ಹಾಗೂ ಮೆಸ್ಕಾಂ ಕಚೇರಿಗೆ ನೋಟೀಸು ನೀಡಿ ನ್ಯಾಯಾ ಲಯದಲ್ಲಿ ತೀರ್ಮಾನವಾಗುವವರೆಗೂ ಈ ಆಸ್ತಿಯ ದಾಖಲೆಗಳಿಂದ ಸೆಲೆಸ್ಟಿನ್ ಅವರ ಹೆಸರು ತೆಗೆಯದಂತೆ ಸೂಚಿಸಲಾಗಿದೆ. ಅಂತೆಯೇ ಹಿರಿಯ ನಾಗರಿಕರ ನ್ಯಾಯಾಲಯಕ್ಕೆ ದೂರು ನೀಡಲು ನೆರವು ನೀಡಲಾಗುವುದು ಎಂದು ಡಾ. ವೀಂದ್ರನಾಥ್ ಶಾನುಭಾಗ್ ತಿಳಿಸಿದರು.

ಮಗಳಿಗೆ ಕ್ಷಮೆ ಇಲ್ಲ: ರೋನಾಲ್ಡ್ 

ನಾನು ಹಾಗೂ ಅಮ್ಮ ಇಬ್ಬರೂ ಅವಿದ್ಯಾವಂತರು. ನಮ್ಮಿಬ್ಬರ ಈ ಸ್ಥಿತಿ ದುರುಪಯೋಗ ಪಡಿಸಿ ನನ್ನ ಮಗಳು ಈ ಕೆಟ್ಟ ಕೆಲಸ ಮಾಡಿದ್ದಾಳೆ. ನನಗೆ ಆಸ್ತಿ ಸಿಗದಿದ್ದರೂ ಚಿಂತೆ ಇಲ್ಲ. ನಾನು ಅಮ್ಮನಿಗೆ ಅನ್ಯಾಯ ಮಾಡುವುದಿಲ್ಲ. ಯಾವ ನ್ಯಾಯಾಲಯದಲ್ಲಾದರು ದಾವೆ ಹೂಡಿ ಅಮ್ಮನ ಆಸ್ತಿಯನ್ನು ಹಿಂದಿರುಗಿಸುತ್ತೇನೆ ಎಂದು ರೋಶನಿ ತಂದೆ ರೋನಾಲ್ಡ್ ಡಿಸೋಜ ತಿಳಿಸಿದ್ದಾರೆ.

ಸಣ್ಣ ಪ್ರಾಯದಲ್ಲೇ ನಮ್ಮೆಲ್ಲರ ಇಚ್ಚೆಗೆ ವಿರುದ್ಧವಾಗಿ ಮದುವೆ ಮಾಡಿಕೊಂಡು ಹೋದ ಆಕೆ, ಹಲವು ವರ್ಷದ ನಂತರ ವಾಪಸು ಬಂದಾಗ ಅಮ್ಮ ಕ್ಷಮೆ ಮಾಡಿ ಮನೆಯೊಳಗೆ ಸೇರಿಸಿದರು. ಈಗ ನನ್ನ ಮಗಳು ಮಾಡಿರುವ ಪಾಪಕ್ಕಾಗಿ ನಾನು ಅಮ್ಮ ಹಾಗೂ ಕುಟುಂಬದ ಎಲ್ಲರೊಡನೆ ಕ್ಷಮೆ ಯಾಚಿಸುತ್ತೇನೆ. ಈಗ ಅವಳೆಲ್ಲಿದ್ದಾಳೆ ಎಂದು ಗೊತ್ತಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News