ಉತ್ತರ ಪ್ರದೇಶದಲ್ಲಿ ಮಹಿಳಾ ದೌರ್ಜನ್ಯ ವಿರೋಧಿಸಿ ಸಿಎಫ್‌ಐ ಪ್ರತಿಭಟನೆ
ಉಡುಪಿ, ಅ.6: ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಮಹಿಳೆ ಯರ ಮೇಲಿನ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಖಜಾಂಚಿ ಯನ್ನು ಬಿಡುಗಡೆಗೆ ಆಗ್ರಹಿಸಿ ಸಿಎಫ್‌ಐ ಉಡುಪಿ ಜಿಲ್ಲಾ ಸಮಿತಿ ಮಂಗಳ ವಾರ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಮಸೂದ್ ಮನ್ನಾ ಮಾತನಾಡಿ, ಇಂದು ದೇಶದಲ್ಲಿ ಮಹಿಳೆ ಯರಿಗೆ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಹೋರಾಟ ಜಾತಿ, ಪಕ್ಷ ನೋಡಿ ಅಲ್ಲ, ಬದಲು ಹೆಣ್ಣಿನ ರಕ್ಷಣೆಗಾಗಿ. ದಲಿತ ಯುವತಿಯ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ವಹಿಸುವವರಿಗೆ ಸಭೆ ನಡೆಸಲು ಅವಕಾಶ ಮಾಡಿಕೊಡುವ ಸರಕಾರ, ಅದರ ವಿರುದ್ಧ ನಡೆಸುವ ಪ್ರತಿಭಟನೆ ಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಉತ್ತರ ಪ್ರದೇಶದ ಪೊಲೀಸರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ವಿಪಕ್ಷ ಮುಖಂಡರು, ಪತ್ರಕರ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರಕಾರ ಕೂಡಲೇ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರಿಂದ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಶೇಕ್, ಉಪಾಧ್ಯಕ್ಷೆ ಝಮ್‌ಝಮ್, ಕಾರ್ಯದರ್ಶಿ ಸಫ್ವಾನ್, ಪ್ರಮುಖರಾದ ತೌಹೀದ್, ಆಸೀಲ್, ಸಾಧಿಕ್ ಮೊದಲಾದವರು ಉಪಸ್ಥಿತರಿದ್ದರು.