×
Ad

ನವೆಂಬರ್ ಅಂತ್ಯಕ್ಕೆ ಜಿಲ್ಲಾದ್ಯಂತ ಯಕ್ಷಗಾನ ಪ್ರದರ್ಶನ: ಸಚಿವ ಕೋಟ

Update: 2020-10-06 20:55 IST

ಮಂಗಳೂರು, ಅ.6: ಯಕ್ಷಗಾನ ಕಲಾವಿದರು ವೃತ್ತಿಯನ್ನು ಕಳೆದುಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ಸಂಪ್ರದಾಯದ ಪ್ರಕಾರ ಕರಾವಳಿಯ ಗಂಡುಕಲೆ ಯಕ್ಷಗಾನ ಜಿಲ್ಲಾದ್ಯಂತ ನವೆಂಬರ್ ಅಂತ್ಯಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಯಕ್ಷಗಾನ ಮೇಳಗಳ ಸಂಚಾಲಕರ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿದರು.

ಕೋವಿಡ್-19ನಿಂದಾಗಿ ಯಕ್ಷಗಾನ ಕಲಾವಿದರ ಸ್ಥಿತಿ ಸಂಕಷ್ಟದಲ್ಲಿ ಸಿಲುಕಿದ್ದು, ಯಾವುದೇ ಕಲಾವಿದನಿಗೆ ಅನ್ಯಾಯವಾಗದಂತೆ ಶೀಘ್ರದಲ್ಲಿಯೇ ಸರಕಾರದಿಂದ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕಟೀಲು, ಬಪ್ಪನಾಡು, ಸಸಿಹಿತ್ಲು ಸೇರಿದಂತೆ 20ಕ್ಕೂ ಹೆಚ್ಚು ವೃತ್ತಿಪರ ತೆಂಕುತಿಟ್ಟಿನ ಯಕ್ಷಗಾನ ಮೇಳಗಳಿದ್ದು, ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ಪೂರಕ ಕೆಲಸಗಾರರಿದ್ದಾರೆ. ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಬಯಲಾಟ ಆರಂಭವಾಗಲಿದ್ದು, ಕಲಾವಿದರ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಆದ್ಯ ಕರ್ತವ್ಯವಾಗಿರುವುದರಿಂದ ಸರಕಾರದ ಮಾರ್ಗಸೂಚಿಯಂತೆ ಆರೋಗ್ಯ ಇಲಾಖೆಯ ವತಿ ಯಿಂದ ಯಕ್ಷಗಾನ ಕಲಾವಿದರು ಪ್ರದರ್ಶನ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಕೊರೋನ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಜೊತೆಗೆ ಯಕ್ಷಗಾನ ಮೇಳಗಳಲ್ಲಿಯೂ ಸಹ ವಾರಕ್ಕೆ ಒಂದು ಬಾರಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದರು.

ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ., ಕಟೀಲು ದೇವಳದ ಆಡಳಿತ ಮೊಕ್ತೇಸರ ಶ್ರೀಹರಿ ಅಸ್ರಣ್ಣ ಮಾತನಾಡಿದರು. ಸಭೆಯಲ್ಲಿ ಯಕ್ಷಗಾನದ ತಂಡದ ಉಜಿರೆ ಅಶೋಕ್ ಭಟ್, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜೇಶ್, ಕಲಾವಿದರಾದಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಸೀತಾರಾಮ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News