ಮೀನಿನ ಚಿಪ್ಸ್, ಮೀನಿನ ಉತ್ಪನ್ನ ಪೂರೈಕೆಗೆ ಆದ್ಯತೆ ನೀಡಿ: ಸಚಿವ ಕೋಟ
ಮಂಗಳೂರು, ಅ. 6: ಪೂರ್ವಪರ ಮಾಹಿತಿ ಪಡೆದು ವ್ಯಾಪಾರ ಮಾಡುವ ಸಾಮಾರ್ಥ್ಯವುಳ್ಳ ಮೀನಿನ ಉತ್ಪನ್ನಗಳ ವಿತರಕರನ್ನು ಆಯ್ಕೆ ಮಾಡಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು
ದ.ಕ. ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಮಂಗಳವಾರ ನಡೆದ ಮೀನಿನ ಚಿಪ್ಸ್ ಉತ್ಪಾದನೆಯ ವಿತರಕರ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿದರು.
ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಸಣ್ಣ ಉದ್ದಿಮೆದಾರರಿಗೆ ಮೀನು ಮತ್ತು ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅವಶ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಮೀನಿನ ಚಿಪ್ಸ್ ಮತ್ತು ಮೀನಿನ ಮಸಾಲೆ ಪದಾರ್ಥಗಳನ್ನು ಈಗಾಗಲೇ ಬಿಡುಗಡೆಗೊಳಿಸಿದ್ದಾರೆ. ಹಾಗಾಗಿ ಮೀನಿನ ಉತ್ಪನ್ನ ಪೂರೈಕೆ ಹಾಗೂ ವಿತರಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಚಿವರು ನುಡಿದರು.
ಈ ಸಂದರ್ಭ ಮತ್ಸ್ಯದರ್ಶಿನಿ ಮಳಿಗೆಗಳಿಗೆ ಮೀನು ಹಾಗೂ ಮೀನಿನ ಉತ್ಪನ್ನಗಳನ್ನು ಸರಬರಾಜು ಮಾಡುವ ಬಗ್ಗೆ ಮತ್ಸ್ಯ ಬಂಧನ ಪ್ರೈವೆಟ್ ಲಿ. ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರತಿಯನ್ನು ಹಸ್ತಾಂತರಿಸಲಾುತು. ಅಲ್ಲದೆ ಕರಾವಳಿ ಪಡೆಯ ಮೂಲಕ ಮೀನುಗಾರರ ಚಲವಲನ ದಾಖಲಿಸುವ ಮೊಬೈಲ್ ಆ್ಯಪ್‌ನ್ನು ಸಚಿವರು ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯ ಮೀನುಗಾರಿಕೆ ಸಹಕಾರಿ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್. ದೊಡ್ಡಮನಿ, ಜನರಲ್ ಮ್ಯಾನೇಜರ್ ಪಿ.ಎಂ. ಮುದ್ದಣ್ಣ, ಮೀನುಗಾರಿಕಾ ಉಪನಿರ್ದೇಶಕ ಪಾಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.