ಭೀಮಾ ಕೋರೆಗಾಂವ್ ಆಯೋಗದ ಗಡು ವಿಸ್ತರಣೆ: ಡಿಸೆಂಬರ್ 31ರ ಮುನ್ನ ವರದಿ ಸಲ್ಲಿಸಲು ಸೂಚನೆ

Update: 2020-10-06 16:43 GMT

ಮುಂಬೈ, ಅ. 6: ಭೀಮಾ ಕೋರೆಗಾಂವ್ ಜಾತಿ ಸಂಘರ್ಷದ ಪ್ರಕರಣದ ತನಿಖೆ ಪೂರ್ಣಗೊಳಿಸಲು ಭೀಮಾ ಕೋರೆಗಾಂವ್ ಆಯೋಗಕ್ಕೆ ನೀಡಲಾಗಿದ್ದ ಅಂತಿಮ ಗಡುವನ್ನು ಮಹಾರಾಷ್ಟ್ರ ಗೃಹ ಇಲಾಖೆ ವಿಸ್ತರಿಸಿದೆ ಹಾಗೂ ಡಿಸೆಂಬರ್ 31ರ ಮುನ್ನ ವರದಿ ಸಲ್ಲಿಸುವಂತೆ ಸೂಚಿಸಿದೆ.

ಪುಣೆ ಸಮೀಪದ ಭೀಮಾ ಕೋರೆಗಾಂವ್‌ನಲ್ಲಿ 2018 ಜನವರಿ 1ರಂದು ಸಂಭವಿಸಿದ ಜಾತಿ ಸಂಘರ್ಷದ ತನಿಖೆ ನಡೆಸುತ್ತಿರುವ ಇಬ್ಬರು ಸದಸ್ಯರ ಈ ಆಯೋಗಕ್ಕೆ ಇದು 7ನೇ ಬಾರಿ ಗಡು ವಿಸ್ತರಣೆ. ಈ ಹಿಂದಿನ ಗಡು ವಿಸ್ತರಣೆ ಎಪ್ರಿಲ್ 8ಕ್ಕೆ ಅಂತ್ಯಗೊಂಡಿತ್ತು. ಸರಕಾರದ ಆದೇಶದ ಮೂಲಕ ಆಯೋಗಕ್ಕೆ 7ನೇ ಹಾಗೂ ಕೊನೆಯ ಬಾರಿ ಗಡುವನ್ನು 2020 ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ.

ಆಯೋಗ ಈ ಗಡು ವಿಸ್ತರಣೆಯ ಅವಧಿಯ ಒಳಗೆ ವರದಿ ಸಲ್ಲಿಸಬೇಕು ಎಂದು ಗೃಹ ಇಲಾಖೆಯ ಉಪ ಕಾರ್ಯದರ್ಶಿ ವಿ.ಎಂ. ಭಟ್ ಆದೇಶಿಸಿದ್ದಾರೆ. ‘‘ಕೊರೋನ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯವಾಗಿ ವಿಚಾರಣೆ ನಡೆಸುವುದು ಸೇರಿದಂತೆ ಕೆಲವು ಸಮಸ್ಯೆಗಳನ್ನು ಆಯೋಗ ಹಾಗೂ ಅದರ ಸಿಬ್ಬಂದಿ ಎದುರಿಸಿತು. ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ವಿಚಾರಣೆಯಲ್ಲಿ ಸಾಕ್ಷಿಗಳು ಹಾಜರಾಗುವುದು ಹಾಗೂ ವಾದಿಸುವುದು ಕಷ್ಟಕರವಾಗಿತ್ತು’’ ಎಂದು ಆಯೋಗದ ರಿಜಿಸ್ಟ್ರಾರ್ ವಿ.ವಿ. ಪಾಲ್ನಿಟ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News