ಅ.10: ತುಳು ಲಿಪಿ ದಿನ ಘೊಷಣೆಯೊಂದಿಗೆ ಪು.ವೆಂ.ಪು. ನೂತ್ತೊಂಜಿ ನೆಂಪು
ಮಂಗಳೂರು, ಅ.7: ತುಳು ಭಾಷೆಯ ಲಿಪಿಯನ್ನು ಪರಿಚಯಿಸಿದ ಸಂಶೋಧಕ ಡಾ. ವೆಂಕಟರಾಜ ಪುಣಿಂಚತ್ತಾಯ ಅವರ 84ನೇ ಜನ್ಮ ದಿನ ಅ.10ರಂದು ಬೆಳಗ್ಗೆ 10ಕ್ಕೆ ಉರ್ವಸ್ಟೋರ್‌ನ ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಕಾರದೊಂದಿಗೆ ಐಲೇಸ ಬೆಂಗಳೂರು ಮತ್ತು ತುಳುವರ್ಲ್ಡ್ ಮಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಪು.ವೆಂ.ಪು. ನೂತ್ತೊಂಜಿ ನೆಂಪು ಎಂಬ ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ತುಳು ಲಿಪಿಗೆ ಮಹತ್ತರ ಕೊಡುಗೆ ನೀಡಿದ ಪುಣಿಂಚತ್ತಾಯ ಅವರ ಜನ್ಮದಿನವಾದ ಅ.10ನ್ನು ಇನ್ನು ಮುಂದೆ ತುಳುಲಿಪಿ ದಿನವೆಂದು ಆಚರಿಸಲು ಕರೆ ನೀಡ ಲಾಗುವುದು. ತುಳುವಿಗೆ ಡಿಜಿಟಲ್ ಮಾಧ್ಯಮದ ಕೊರತೆಯನ್ನು ನೀಗಿಸಲು ವಿಶ್ವಾದ್ಯಂತ ನೆಲೆಸಿರುವ ತುಳುವರು ಒಗ್ಗೂಡಿ ಪ್ರಾರಂಭಿಸಿದ ಐಲೇಸಾದ ಯೋಜನೆಯಂತೆ 101 ಕವಿಗಳು ಬರೆದ ತುಳು ಭಾವಗೀತೆಗಳ ಪುಸ್ತಕವನ್ನು ಬಿಡುಗಡೆಗೊಳಿಸಿ ಡಾ. ವೆಂಕಟರಾಜ ಪುಣಿಂಚತ್ತಾಯ ರಿಗೆ ಸಮರ್ಪಿಸಲಾಗುತ್ತದೆ. ತುಳುವರ್ಲ್ಡ್ ಕೊಡಮಾಡಲ್ಪಡುವ ಪು.ವೆಂ.ಪು. ಸಮ್ಮಾನ್‌ನ್ನು ಖ್ಯಾತ ಗಾಯಕ ಕೃಷ್ಣ ಕಾರಂತರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.