‘ಕೊರೋನಕ್ಕೆ ಮಾತ್ರೆ’: ಜಾಹೀರಾತಿನ ವಿರುದ್ಧ ದೂರು
Update: 2020-10-07 20:51 IST
ಮಂಗಳೂರು, ಅ.7: ನಗರದ ಕ್ಲಾಕ್‌ಟವರ್ ಬಳಿಯ ‘ಆಯುರ್ ವಿವೇಕ್’ನಲ್ಲಿ ಗಿರಿಧರ ಕಜೆ ಅವರ ‘ಸಮತ್ವ’ ಕೊರೋನ ಗುಣಪಡಿಸುವ ಮಾತ್ರೆ ಲಭ್ಯವಿದೆ ಎಂಬ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತೆ ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ ಅವರು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಆಯುಷ್ಮಾನ್ ಇಲಾಖೆಯ ಅಧಿಕಾರಿಗೆ ದೂರು ನೀಡಿದ್ದಾರೆ.
240 ರೂ.ಗೆ 60 ಮಾತ್ರೆಗಳು ಸಿಗಲಿದೆ. ಆರೋಗ್ಯವಂತರು ದಿನಕ್ಕೆ 1ರ ಹಾಗೆ 10 ದಿನ ಮತ್ತು ಕೊರೋನ ಸೋಂಕಿತರು ದಿನಕ್ಕೆ 2ರ ಹಾಗೆ 10 ದಿನ ಮಾತ್ರೆ ಸೇವಿಸಬೇಕು ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ. ಕೊರೋನಕ್ಕೆ ಇನ್ನೂ ಮದ್ದು ಕಂಡು ಹಿಡಿದಿಲ್ಲ. ಆದಾಗ್ಯೂ ಮಂಗಳೂರಿನ ಮೆಡಿಕಲ್‌ವೊಂದರಲ್ಲಿ ಕೊರೋನ ರೋಗ ಗುಣಪಡಿಸುವ ಮಾತ್ರೆ ಲಭ್ಯವಿದೆ ಎಂದು ಜಾಹೀರಾತು ನೀಡಿ ಜನರ ದಿಕ್ಕು ತಪ್ಪಿಸ ಲಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.