ಫ್ರಾನ್ಸ್‌ನ ಇಮ್ಯಾನುವೆಲ್ ಕಾರ್ಪೆಂಟಿಯರ್, ಅಮೆರಿಕದ ಜೆನಿಫರ್ ಡೌಡಾಗೆ ರಸಾಯನಶಾಸ್ತ್ರ ನೊಬೆಲ್
ಸ್ಟಾಕ್‌ಹೋಮ್, ಅ. 7: ಸಿಆರ್‌ಐಎಸ್‌ಪಿಆರ್ ಎಂದು ಕರೆಯಲಾಗುವ ವಂಶವಾಹಿ ಸಂಕಲನ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದಕ್ಕಾಗಿ ಫ್ರಾನ್ಸ್‌ನ ಇಮ್ಯಾನುವೆಲ್ ಕಾರ್ಪೆಂಟಿಯರ್ ಹಾಗೂ ಅಮೆರಿಕದ ಜೆನಿಫರ್ ಡೌಡ್ನಾ ರಸಾಯನಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಸಾಯನ ಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಇಮ್ಯಾನುವೆಲ್ ಕಾರ್ಪೆಂಟಿಯರ್ ಹಾಗೂ ಜೆನಿಫರ್ ಡೌಡಾ ಆಯ್ಕೆಯಾಗಿರುವುದನ್ನು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸಯನ್ಸ್‌ನ ಪ್ರಧಾನ ಕಾರ್ಯದರ್ಶಿ ಗೋರನ್ ಹಾನ್ಸನ್ ಸ್ಟಾಕ್‌ಹೋಮ್‌ನಲ್ಲಿ ಬುಧವಾರ ಘೋಷಿಸಿದರು.
ಈ ಪ್ರತಿಷ್ಠಿತ ಪ್ರಶಸ್ತಿ ಚಿನ್ನದ ಪದಕ ಹಾಗೂ 1 ಕೋಟಿ ಸ್ವೀಡನ್ ಕ್ರೋನಾ ಬಹುಮಾನವನ್ನು ಒಳಗೊಂಡಿದೆ. ಸಂಶೋಧಕರು ಈ ತಂತ್ರಜ್ಞಾನವನ್ನು ಬಳಸಿ ಪ್ರಾಣಿಗಳು, ಸಸ್ಯಗಳು ಹಾಗೂ ಅತಿ ಸೂಕ್ಷ್ಮ ಜೀವಿಗಳ ಡಿಎನ್‌ಎಯನ್ನು ಅತ್ಯಂತ ನಿಖರವಾಗಿ ಬದಲಾಯಿಸಬಹುದು ಎಂದು ನೋಬೆಲ್ ಜ್ಯೂರಿ ತಿಳಿಸಿದ್ದಾರೆ. ಈ ತಂತ್ರಜ್ಞಾನ ಜೀವ ವಿಜ್ಞಾನದ ಮೇಲೆ ಕ್ರಾಂತಿಕಾರಿ ಪರಿಣಾಮ ಉಂಟು ಮಾಡಲಿದೆ. ನೂತನ ಕ್ಯಾನ್ಸರ್ ಥೆರಪಿಗೆ ಕೊಡುಗೆ ನೀಡಲಿದೆ ಹಾಗೂ ಆನುವಂಶಿಕ ರೋಗಗಳನ್ನು ಗುಣಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ 2011ರಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಿದ ಬಳಿಕ ಕಾರ್ಪೆಂಟಿಯರ್ ಅವರು ಡೌಡ್ನಾ ಜೊತೆಗೆ ಈ ವಂಶವಾಹಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸಿದರು 1 ಕೋಟಿ ಸ್ವೀಡಿಶ್ ಕ್ರೋನಾ ಬಹುಮಾನವನ್ನು ಇಬ್ಬರು ಹಂಚಿಕೊಳ್ಳಲಿದ್ದಾರೆ.