14 ದೇಶಗಳಲ್ಲಿ ಚೀನಾ ವಿರೋಧಿ ಭಾವನೆ: ಸಮೀಕ್ಷೆ
Update: 2020-10-07 21:38 IST
ವಾಶಿಂಗ್ಟನ್, ಅ. 7: ಅಮೆರಿಕ ಮತ್ತು ಇತರ ಹಲವು ಮುಂದುವರಿದ ದೇಶಗಳಲ್ಲಿ ಕಳೆದ ಒಂದು ವರ್ಷದಿಂದ ಚೀನಾ ವಿರೋಧಿ ಭಾವನೆಗಳು ಬೆಳೆದಿವೆ ಎಂದು ಅಮೆರಿಕದ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆಯೊಂದು ಹೇಳಿದೆ.
ಈ ಸಂಸ್ಥೆಯು ಜೂನ್ 10ರಿಂದ ಆಗಸ್ಟ್ 3ರವರೆಗೆ 14 ದೇಶಗಳಲ್ಲಿ ಸಮೀಕ್ಷೆ ನಡೆಸಿದ್ದು, ತನ್ನ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲ ದೇಶಗಳ ಹೆಚ್ಚಿನ ಜನರು ಚೀನಾದ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿಲ್ಲ ಎನ್ನುವುದನ್ನು ಸಮೀಕ್ಷೆ ಪತ್ತೆಹಚ್ಚಿದೆ. ಒಟ್ಟು 14,276 ಮಂದಿಯನ್ನು ಫೋನ್ ಮೂಲಕ ಸಂದರ್ಶಿಸಲಾಗಿತ್ತು.
ಆಸ್ಟ್ರೇಲಿಯ, ಬ್ರಿಟನ್, ಜರ್ಮನಿ, ನೆದರ್‌ಲ್ಯಾಂಡ್ಸ್, ಸ್ವೀಡನ್, ಅಮೆರಿಕ, ದಕ್ಷಿಣ ಕೊರಿಯ, ಸ್ಪೇನ್ ಮತ್ತು ಕೆನಡ ದೇಶಗಳಲ್ಲಿ ಅತಿ ಹೆಚ್ಚಿನ ಜನರು ಚೀನಾ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.