×
Ad

ಸುವರ್ಣ ತ್ರಿಭುಜ ಬೋಟು ನಾಪತ್ತೆ ಪ್ರಕರಣ; ಕೇಂದ್ರ, ರಾಜ್ಯ ಸರಕಾರಗಳಿಂದ ಮೀನುಗಾರರಿಗೆ ಅನ್ಯಾಯ: ಗಣಪತಿ ಮಾಂಗ್ರೆ

Update: 2020-10-07 22:42 IST

ಉಡುಪಿ, ಅ.7: 2018ರ ಡಿ.15ರಂದು ಮಲ್ಪೆ ಮತ್ತು ಉತ್ತರ ಕನ್ನಡದ ಒಟ್ಟು ಏಳು ಮಂದಿ ಮೀನುಗಾರರೊಂದಿಗೆ ನಾಪತ್ತೆಯಾದ ಮಲ್ಪೆಯ ‘ಸುವರ್ಣ ತ್ರಿಭುಜ’ ಬೋಟು ಅವಘಡದಲ್ಲಿ ಆಗಿನ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ರಾಜ್ಯದ ಮೀನುಗಾರರಿಗೆ ಅನ್ಯಾಯ ಎಸಗಿವೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಷನ್‌ನ ಅಧ್ಯಕ್ಷ ಗಣಪತಿ ಮಾಂಗ್ರೆ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವರ್ಷ ಎಂಟು ತಿಂಗಳ ಹಿಂದೆ ಇಡೀ ದೇಶದಲ್ಲಿ ಆತಂಕ ಸೃಷ್ಟಿಸಿದ್ದ ಮಲ್ಪೆಯ ಸುವರ್ಣ ತ್ರಿಭುಜ ಪ್ರಕರಣದಲ್ಲಿ ನಾಪತ್ತೆಯಾದ ಕರಾವಳಿ ಜಿಲ್ಲೆಗಳ ಏಳು ಮಂದಿ ಬಡ ಮೀನುಗಾರರಿಗೆ ನ್ಯಾಯ ದೊರಕಿದೆಯೇ ಎಂದು ಅವರನ್ನು ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿದರು.

ಏಳು ಮಂದಿ ಮೀನುಗಾರರೊಂದಿಗೆ ಡಿ.13ರಂದು ಆಳಸಮುದ್ರ ಮೀನುಗಾರಿಕೆಗೆ ತೆರಳಿ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ತೀರದಲ್ಲಿ ಡಿ.15ರ ಮಧ್ಯರಾತ್ರಿ ನಂತರ ಹಠಾತ್ತನೆ ಹೊರಗಿನ ಎಲ್ಲಾ ಸಂಪರ್ಕ ಕಡಿದು ಕೊಂಡ ಸುವರ್ಣ ತ್ರಿಭುಜ ಬೋಟಿನ ಅವಘಡದಲ್ಲಿ ನೌಕಾಪಡೆ ಯನ್ನು ರಕ್ಷಿಸುವ ಉದ್ದೇಶದಿಂದ ಪ್ರಕರಣದ ಸತ್ಯವನ್ನು ಮುಚ್ಚಿಡಲಾಗಿದೆ ಎಂದ ಅವರು, ನೌಕಾ ಪಡೆಯ ಕೆಲವು ಅಧಿಕಾರಿಗಳು ಸತ್ಯ ಹೇಳಲು ಕೊನೆಯ ಕ್ಷಣದಲ್ಲಿ ಹಿಂಜರಿದರು ಎಂದರು.

ಬೋಟು ಅವಘಡಕ್ಕೆ ಯಾರು ಕಾರಣ ಹಾಗೂ ಮೀನುಗಾರರ ನಾಪತ್ತೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಈ ಅವಘಡ ಮಾಡಿರುವುದನ್ನು ಒಪ್ಪಿಕೊಂಡರೆ, ಏಳು ಮಂದಿ ಮೀನುಗಾರರ ರಕ್ಷಣೆ ಮಾಡಲು ಸಾಧ್ಯವಾಗದೇ ಇರುವವರು ದೇಶದ ರಕ್ಷಣೆ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಅಂಜಿ ಸತ್ಯ ಒಪ್ಪಿಕೊಳ್ಳಲು ಹಿಂಜರಿಯುತಿದ್ದಾರೆ ಎಂದ ಗಣಪತಿ ಮಾಂಗ್ರೆ, ನೌಕಾ ಪಡೆ, ತಾವು ಅವಘಡಕ್ಕೆ ಕಾರಣ ಎಂಬುದನ್ನು ಬಹಿರಂಗ ವಾಗಿ ಒಪ್ಪಿಕೊಂಡಿದೆಯೇ ಎಂದು ಪ್ರಶ್ನಿಸಿದಾಗ ತಿಳಿಸಿದರು.

ಪಶ್ಚಿಮ ಕರಾವಳಿಯಲ್ಲಿ ನೌಕಾಪಡೆಯ ಹಡಗೊಂದು ಡಿ.15ರ ರಾತ್ರಿ ಡಿಕ್ಕಿ ಹೊಡೆದು ಸುವರ್ಣ ತ್ರಿಭುಜ ಮುಳುಗಿದ್ದು, ಅವಘಡಕ್ಕೆ ಕಾರಣವಾದ ನೌಕಾಪಡೆಯ ಹಡಗನ್ನು ರಿಪೇರಿ ಮಾಡಿರುವುದು ತಮಗೆ ಖಚಿತವಾಗಿ ಗೊತ್ತಿದೆ ಎಂದು ಅವರು ಹೇಳಿದರು.

ಸಿಗದ ನ್ಯಾಯ: ಸುವರ್ಣ ತ್ರಿಭುಜ ಬೋಟಿನಲ್ಲಿದ್ದು, ಇನ್ನೂ ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಸಿಗಬೇಕಾದ ನ್ಯಾಯ ಇನ್ನೂ ದೊರ ಕಿಲ್ಲ. ಈ ಬಡ ಮೀನುಗಾರ ಕುಟುಂಬಕ್ಕೆ ನ್ಯಾಯ ದೊರಕಿಸಿ, ದೊಡ್ಡ ಮೊತ್ತದ ಪರಿಹಾರಕ್ಕಾಗಿ ಉಡುಪಿ ಮತ್ತು ಉತ್ತರ ಕನ್ನಡದ ಮೀನುಗಾರ ಬಾಂಧವರು ಶ್ರಮಿಸಿದ್ದಾರೆ. ಆದರೆ ರಾಜ್ಯದಿಂದ ಪರಿಹಾರ ಸಿಕ್ಕಿದ್ದು, ಕೇಂದ್ರದ ಹಣ ಇನ್ನೂ ಬಂದಿಲ್ಲ. ಕೇಂದ್ರದಿಂದ ಪರಿಹಾರ ದೊರೆಯುವ ಭರವಸೆ ಇನ್ನೂ ಈಡೇರಿಲ್ಲ ಎಂದವರು ನುಡಿದರು.

ಸುವರ್ಣ ತ್ರಿಭುಜ ಮುಳುಗಿರುವುದು ನಿಜ: ಸುವರ್ಣ ತ್ರಿಭುಜ ಮುಳುಗಿರುವುದನ್ನು ಕಂಡಿರುವುದು ಹೌದಾದರೆ, ಯಾಕೆ ಬೋಟನ್ನು ಇನ್ನೂ ಮೇಲೆತ್ತಿ, ಅದರಲ್ಲಿ ಸಿಕ್ಕಿಹಾಕಿಕೊಂಡಿರಬಹುದಾದ ಮೀನುಗಾರರ ಅವಶೇಷ ಗಳನ್ನು ತೆಗೆಯಲಾಗಿಲ್ಲ ಎಂದು ಅವರನ್ನು ಪ್ರಶ್ನಿಸಿದಾಗ, ಆಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೆರವಿನಿಂದ ನೌಕಾಪಡೆಯ ಮೂಲಕ ಸ್ವತಹ ಉಡುಪಿ ಮತ್ತು ಉತ್ತರ ಕನ್ನಡದ ಮೀನುಗಾರ ಪ್ರತಿನಿಧಿಗಳು ತೆರಳಿ ಬೋಟು ಮುಳುಗಿರುವ ಸ್ಥಳವನ್ನು ಗುರುತಿಸಿದ್ದಾರೆ ಎಂದರು.

ಅದರೆ ಬೋಟು ಅವಘಡವಾಗಿರುವ ಸ್ಥಳವನ್ನು ಗುರುತಿಸಿದ್ದರೂ, ಬೋಟನ್ನು ಇನ್ನೂ ಮೇಲಕ್ಕೆತ್ತುವ ಯಾವುದೇ ಪ್ರಯತ್ನವನ್ನು ಇದುವರೆಗೆ ಮಾಡಿಲ್ಲ. ಬೋಟನ್ನು ಮೇಲೆತ್ತಿ ಅದರಲ್ಲಿರುವ ಮೀನುಗಾರರ ಮೃತದೇಹಕ್ಕೆ ಮೋಕ್ಷ ಕರುಣಿಸಲು ಕುಟುಂಬಕ್ಕೆ ಅವಕಾಶ ಮಾಡಿಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಯಾರೂ ನಮ್ಮ ನೆರವಿಗೆ ಬರುತ್ತಿಲ್ಲ. ರಾತ್ರಿ ಕಣ್ಣು ಮುಚ್ಚಿದರೆ, ಕಡಲಿನಾಳದಿಂದ ನಮಗೆ ಅವರ ಆಕ್ರಂಧನ ಕೇಳುತ್ತದೆ ಎಂದವರು ನುಡಿದರು.

ಉಪಸ್ಥಿತರಿದ್ದ ಮಲ್ಪೆಯ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ ಸುವರ್ಣ ಮಾತನಾಡಿ, ನೌಕಾಪಡೆಯ ಹಡಗಿನಲ್ಲಿ ಸುವರ್ಣ ತ್ರಿಭುಜ ಪತ್ತೆಗೆ ಹೋದ 10 ಮಂದಿ ಮೀನುಗಾರರ ತಂಡದಲ್ಲಿ ತಾನಿದ್ದು, ಸುವರ್ಣ ತ್ರಿಭುಜದ ಅವಶೇಷವನ್ನು ತಾನು ಸಮುದ್ರದಾಳದಲ್ಲಿ ಕಂಡಿರು ವುದಾಗಿ ನುಡಿದರು. ಆದರೆ ಅದನ್ನು ಇನ್ನೂ ಯಾಕೆ ಮೇಲಕ್ಕೆತ್ತಿಲ್ಲ ಎಂಬುದು ತನಗೆ ಗೊತ್ತಿಲ್ಲ ಎಂದರು.

ಇನ್ನು ಪ್ರಕೃತಿ ವಿಕೋಪ ಸಂಕಷ್ಟ ಪರಿಹಾರ ನಿಧಿಯಿಂದ ಮೀನುಗಾರಿಕೆ ವೇಳೆ ಮೃತಪಡುವ ಮೀನುಗಾರರಿಗೆ ನೀಡುವ ಪರಿಹಾರ ಹಣದಲ್ಲಿ ತಾರತಮ್ಯ ಬೇಡ. ಸಮುದ್ರದಲ್ಲಿ ಮುಳುಗಿ ಮೃತಪಟ್ಟರೆ ಆರು ಲಕ್ಷ ರೂ. ಪರಿಹಾರ, ನದಿ ನೀರಿಗೆ ಬೆದ್ದು ಸತ್ತರೆ ಮೂರು ಲಕ್ಷ ಎಂಬ ತಾರತಮ್ಯ ಮಾಡದೇ ಎಲ್ಲರಿಗೂ ತಲಾ ಆರು ಲಕ್ಷ ರೂ.ಪರಿಹಾರ ನೀಡಬೇಕು ಎಂದು ಗಣಪತಿ ಮಾಂಬ್ರೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರವಾರ ಪರ್ಸಿನ್ ಮೀನುಗಾರರ ಸಂಘದ ಸದಸ್ಯ ನಿತಿನ್ ರಮಾಕಾಂತ್ ಗಾಂವ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News