ಪೌರ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಬದ್ಧ: ದಿವಾಕರ ಪಾಂಡೇಶ್ವರ
ಮಂಗಳೂರು, ಅ. 7: ನಗರದಲ್ಲಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರಿಗೆ ಎಲ್ಲಾ ವಿಧದ ಸೌಲಭ್ಯಗಳನ್ನು ಒದಗಿಕೊಡಲು ಪಾಲಿಕೆ ಬದ್ಧವಾಗಿದೆ ಎಂದು ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರ ಪುರಭವನದಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾದಂತಹ ಸಂಕಷ್ಟ ಸಮಯದಲ್ಲಿಯೂ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಬೇಕು ಎಂದರು.
ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಉಳಿದ ಎಲ್ಲಾ ವೃತ್ತಿಯವರಿಗೆ ವಾರದಲ್ಲಿ ಒಂದು ದಿನ ರಜಾ ಇದ್ದರೂ, ಪೌರಕಾರ್ಮಿಕರಿಗೆ ಈ ಅವಕಾಶವಿಲ್ಲ. ಕೊರೊನಾ ಸಮಯದಲ್ಲಿ ಪೌರಕಾರ್ಮಿಕರ ಕೆಲಸ ಗುರುತಿಸುವಂತದ್ದು ಎಂದು ತಿಳಿಸಿದರು.
ಪೌರಕಾರ್ಮಿಕರಿಗೆ ವಾರ್ಡ್ ಕಚೇರಿ, ಸಮವಸ ಧರಿಸಲು ಕೊಠಡಿ ವ್ಯವಸ್ಥೆ ಸೇರಿದಂತೆ ಸಂಘದ ಪ್ರಮುಖರು ಮಹಾನಗರ ಪಾಲಿಕೆಗೆ ಕೆಲ ವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ, ನಿವೃತ್ತ ಪೌರಕಾರ್ಮಿಕರಿಗೆ ಸಮ್ಮಾನ ನಡೆಯಿತು. ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್, ಉಪ ಆಯುಕ್ತ ಡಾ. ಸಂತೋಷ್ ಕುಮಾರ್, ಮನಪಾ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಪ್ರತಿಪಕ್ಷ ನಾಯಕ ಅಬ್ದುಲ್ ರವ್ೂ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪೌರಕಾರ್ಮಿಕ ಸಂಘದ ಕಾರ್ಯದರ್ಶಿ ಎಸ್.ಪಿ. ಆನಂದ್ ಸೇರಿದಂತೆ ಪಾಲಿಕೆ ಸದಸ್ಯರು, ಪೌರಕಾರ್ಮಿಕರು ಉಪಸ್ಥಿತರಿದ್ದರು.
ಉತ್ತಮ ಸೇವೆ ಸಲ್ಲಿಸಿದ 15 ಮಂದಿ ಪೌರಕಾರ್ಮಿಕರು ಹಾಗೂ 2019-20ನೇ ಸಾಲಿನಲ್ಲಿ ನಿವೃತ್ತರಾದ ಪೌರಕಾರ್ಮಿಕರನ್ನು ಸನ್ಮಾನಿಸಲಾ ಯಿತು. ಮನಪಾ ಪರಿಸರ ಇಂಜಿನಿಯರ್‌ಗಳಾದ ಶಬರಿನಾಥ ರೈ ಸ್ವಾಗತಿಸಿದರು. ಮಧು ಮನೋಹರ್ ಕಾರ್ಯಕ್ರಮ ನಿರೂಪಿಸಿದರು.
ಪೌರಕಾರ್ಮಿಕರ ಸಮಸ್ಯೆ ನಿರಂತರ. ಇದರಿಂದಾಗಿ ಪೌರಕಾರ್ಮಿಕರ ಜೀವನ ಅವನತಿಗೆ ಸಾಗುತ್ತಿದೆ. ಅವರಿಗೆ ಆರೋಗ್ಯ ಭದ್ರತೆ ಸವಾಲಾಗಿದೆ. ಸರಿಯಾಗಿ ಸಂಬಳ ಕೂಡ ಸಿಗುತ್ತಿಲ್ಲ. ನಿವೃತ್ತಿ ವೇತನ, ಸೇವಾ ನಗದು ಪಡೆಯಲು ಅವರು ಅಲೆದಾಡಬೇಕಾದ ಪರಿಸ್ಥಿತಿಯಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಬೇಕು.
-ಅನಿಲ್ ಕುಮಾರ್, ಅಧ್ಯಕ್ಷರು, ಪೌರಕಾರ್ಮಿಕ ಸಂಘ