ಹತ್ರಸ್ ಸಂತ್ರಸ್ತೆಯ ಕುಟುಂಬಕ್ಕೆ ಕಾನೂನುಬಾಹಿರ ಗೃಹಬಂಧನ: ಅಲಹಾಬಾದ್ ಹೈಕೋರ್ಟ್‌ಗೆ ಮೊರೆ
ಹತ್ರಸ್, ಅ. 8: ಉತ್ತರಪ್ರದೇಶ ಆಡಳಿತದಿಂದ ಗೃಹಬಂಧನಕ್ಕೆ ಒಳಗಾಗಿರುವ ತಮ್ಮನ್ನು ಬಿಡುಗಡೆ ಮಾಡಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹತ್ರಸ್ ಪ್ರಕರಣದ ಸಂತ್ರಸ್ತ ಕುಟುಂಬ ಅಲಹಾಬಾದ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.
ನ್ಯಾಯವಾದಿಗಳಾದ ಮೆಹಮ್ಮೂದ್ ಪ್ರಾಚಾ, ಎಸ್.ಕೆ.ಎ. ರಝ್ವಿ ಹಾಗೂ ಜೋನ್ ಅಬ್ಬಾಸ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಉಚ್ಚ ನ್ಯಾಯಾಲಯಕ್ಕೆ ಹಾಜರುಪಡಿಸುವ ವರೆಗೆ ಕುಟುಂಬದ ಸದಸ್ಯರಿಗೆ ಸುರಕ್ಷತೆಯ ಖಾತರಿ ನೀಡಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೂಡ ಮನವಿ ಮಾಡಲಾಗಿದೆ.
ಅರ್ಜಿಯ ವಿಚಾರಣೆ ಅಕ್ಟೋಬರ್ 12ರಂದು ನಡೆಯಲಿದ್ದು, ಅಂದು ಕುಟುಂಬದ ಸದಸ್ಯರು ಹಾಜರಿರುವಂತೆ ಉಚ್ಚ ನ್ಯಾಯಾಲಯ ಆದೇಶಿಸಿದೆ. ಕುಟುಂಬವನ್ನು ಫೋನ್ ಮೂಲಕ ಸಂಪರ್ಕಿಸಿದ ಅಖಿಲ ಭಾರತೀಯ ವಾಲ್ಮೀಕಿ ಮಹಾಪಂಚಾಯತ್‌ನ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಕುಮಾರ್ ಕುಟುಂಬದ ಸದಸ್ಯರ ಪರವಾಗಿ ಅಲಹಾಬಾದ್ ನ್ಯಾಯಾಲಯಕ್ಕೆ ಈ ಮನವಿ ಸಲ್ಲಿಸಿದ್ದಾರೆ.
ಕುಟುಂಬದ ಸದಸ್ಯರು ಮುಕ್ತವಾಗಿ ಸಂಚರಿಸಲು ಹಾಗೂ ವ್ಯಕ್ತಿಗಳನ್ನು ಭೇಟಿಯಾಗಲು ನಿರ್ಬಂಧ ವಿಧಿಸಲಾಗಿದೆ. ಇದು ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿ ಸ್ವೀಕರಿಸುವ ಹಕ್ಕಿನ ಉಲ್ಲಂಘನೆ ಎಂದು ಮನವಿಯಲ್ಲಿ ಹೇಳಲಾಗಿದೆ. ಕಾನೂನು ಬಾಹಿರವಾಗಿ ಬಂಧನದಲ್ಲಿ ಇರಿಸಿರುವ ತಮ್ಮನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡುವಂತೆ ಕುಟುಂಬ ಉಚ್ಚ ನ್ಯಾಯಾಲಯವನ್ನು ಆಗ್ರಹಿಸಿದೆ. ಅಲ್ಲದೆ, ರಾಜ್ಯದ ಕ್ರಮ ಸಂವಿಧಾನದ ಮೂಲ ಭೂತ ಹಕ್ಕುಗಳು ಹಾಗೂ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಉಲ್ಲಂಘನೆ ಎಂದು ಪ್ರತಿಪಾದಿಸಿದೆ.