×
Ad

ವ್ಯಾಪಾರವಿಲ್ಲದೆ ಕಣ್ಣೀರು ಸುರಿಸುತ್ತಿದ್ದ ವೃದ್ಧ ದಂಪತಿಯ ವಿಡಿಯೋ ವೈರಲ್

Update: 2020-10-08 16:10 IST

ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಮಾಲವಿಯಾ ನಗರ್ ಪ್ರದೇಶದ ರಸ್ತೆ ಬದಿಯ ಬಾಬಾ ಕಾ ಧಾಬಾ ನಡೆಸುವ ಹಿರಿಯ ದಂಪತಿಯ ಮೊಗದಲ್ಲಿ ಈಗ ಸಂತಸ ಮನೆ ಮಾಡಿದೆ. ಅದಕ್ಕೆ ಕಾರಣ ಕುತೂಹಲಕಾರಿ.

ಈ ಧಾಬಾ ನಡೆಸುವ 80 ವರ್ಷದ ಕಾಂತಾ ಪ್ರಸಾದ್ ಮತ್ತವರ ಪತ್ನಿ ಬಾದಾಮಿ ದೇವಿ ಇತ್ತೀಚಿಗಿನವರೆಗೂ ಮ್ಲಾನವದನರಾಗಿದ್ದರು. ಕೋವಿಡ್ ಲಾಕ್ ಡೌನ್ ಹಾಗೂ ನಂತರದ ಪರಿಸ್ಥಿತಿ ಅವರ ವ್ಯಾಪಾರಕ್ಕೆ ದೊಡ್ಡ ಹೊಡೆತ ನೀಡಿದ್ದರಿಂದ ದಂಪತಿ ಕಂಗಾಲಾಗಿದ್ದರು. ಆದರೆ ಗುರುವಾರ ಮಾತ್ರ ಈ ಹಿರಿಯ ದಂಪತಿಯ ಧಾಬಾಗೆ ಜನಸಾಗರವೇ ಹರಿದು ಬಂದಿತ್ತಲ್ಲದೆ  ಹಲವಾರು ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ಈ ವೃದ್ಧ ದಂಪತಿಗೆ ಸಹಾಯ ಹಸ್ತ ಚಾಚಿದ್ದು ದಂಪತಿಯ ಮೊಗದಲ್ಲಿ ಈಗ ನಗು ಅರಳಿದೆ.

ಇದಕ್ಕೆ ಕಾರಣ ಬ್ಲಾಗರ್ ಗೌರವ್ ವಾಸನ್. ಇತ್ತೀಚೆಗೆ ಈ ದಂಪತಿ ಯಾವುದೇ ವ್ಯಾಪಾರವಿಲ್ಲದೆ ಕಣ್ಣೀರು ಸುರಿಸುತ್ತಿದ್ದ ವೀಡಿಯೋವನ್ನು ವಾಸನ್ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಕಾಂತಾ ಪ್ರಸಾದ್ ಮತ್ತವರ ಪತ್ನಿ ಬೆಳಿಗ್ಗೆ 6.30ಕ್ಕೆ ತಮ್ಮ ಮನೆಯಲ್ಲಿ ದಾಲ್, ಪಲ್ಯ, ಪರೋಟ ಮತ್ತು ಅನ್ನ ತಯಾರಿಸಿ  9.30ರೊಳಗಾಗಿ ಗ್ರಾಹಕರಿಗೆ ತಮ್ಮ ಧಾಬಾದಲ್ಲಿ ಕಾಯುತ್ತಾರೆ. ಆದರೆ ತಾವು ಭೇಟಿ ಮಾಡಿದ ದಿನ ದಂಪತಿ ಮಧ್ಯಾಹ್ನವಾದರೂ ಕೇವಲ ರೂ. 60 ವ್ಯಾಪಾರವಾಗಿದೆ ಎಂದು ಅತ್ತಾಗ ನನಗೂ ಅಳು ತಡೆಯಲಾಗಿಲ್ಲ.'' ಎಂದು ಬರೆದಿದ್ದರು.

ದಂಪತಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯಿದ್ದರೂ ಅವರಿಗೆ ಸಹಾಯ ಮಾಡುತ್ತಿಲ್ಲ ಎಂದೂ ಅವರು ಬರೆದಿದ್ದರು.

ಈ ವೀಡಿಯೋ ಹಾಗೂ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಹಲವರು ಧಾಬಾಗೆ ಧಾವಿಸಿ ಅಲ್ಲಿಯ ತಿಂಡಿ ಸವಿದಿದ್ದಾರೆ.

ನಟಿ ಸೋನಂ ಕಪೂರ್, ಕ್ರಿಕೆಟಿಗ ಆರ್ ಅಶ್ವಿನ್ ಸಹಾಯಹಸ್ತದ ಭರವಸೆ ನೀಡಿದ್ದಾರೆ, ಜತೆಗೆ ಐಪಿಎಲ್  ಟೀಂ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಝೊಮ್ಯಾಟೋ ಕೂಡ ಬೆಂಬಲ ವ್ಯಕ್ತಪಡಿಸಿವೆ.

ಹಲವರು ಅಂತರ್ಜಾಲದ ಮೂಲಕ ಈ ದಂಪತಿಗೆ ಸಹಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News