ಖಾಸಗಿ ಆಸ್ಪತ್ರೆಯಲ್ಲಿ ಹಣ ಕಟ್ಟದೆ ಚಿಕಿತ್ಸೆ ನೀಡುವುದಿಲ್ಲ! : ದ.ಕ. ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ಷೇಪ

Update: 2020-10-08 12:20 GMT

ಮಂಗಳೂರು, ಅ.8: ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಉಚಿತ ಎನ್ನಲಾದರೂ, ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕಟ್ಟದೆ ಚಿಕಿತ್ಸೆ ಯನ್ನೇ ನೀಡುವುದಿಲ್ಲ ಎಂಬ ಆರೋಪ ದ.ಕ. ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಇಂದು ಸದಸ್ಯರಿಂದ ವ್ಯಕ್ತವಾಯಿತು.

ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಿರಿಯ ಸದಸ್ಯ ಕೊರಗಪ್ಪ ನಾಯ್ಕ, ಬೆಳ್ತಂಗಡಿಯಲ್ಲಿ ಬಡ ರೋಗಿಯೊಬ್ಬರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸುವ ಬದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಅವರು ಚಿಕಿತ್ಸೆಗೆ ಹಣ ಕಟ್ಟಲಾಗದೆ ತೊಂದರೆಪಡಬೇಕಾಯಿತು. ಇಂತಹ ಸುಮಾರು ಎಂಟು ಪ್ರಕರಣಗಳನ್ನು ನಾನು ಜಿಲ್ಲಾ ವೈದ್ಯಾಧಿಕಾರಿ ಗಮನಕ್ಕೆ ತಂದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯೆ ಮಮತಾ ಗಟ್ಟಿ, ಆಯುಷ್ಮಾನ್ ಯೋಜನೆಯಡಿ ಖಾಸಗಿಯಲ್ಲೂ ಉಚಿತ ಚಿಕಿತ್ಸೆ, ಕೊರೋನ ಚಿಕಿತ್ಸೆಗೆ ಕೇವಲ ಗುರುತು ಚೀಟಿ ಇದ್ದರೆ ಸಾಕು ಎಂದು ಉಸ್ತುವಾರಿ ಸಚಿವರೇ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸಂಕಟ ಪಡಬೇಕಾಗುತ್ತದೆ ಎಂದು ಆಕ್ಷೇಪಿಸಿದರು.

ಸದಸ್ಯೆ ಸುಜಾತಾ ಕೆ.ಪಿ.ಯವರು ಮಾತನಾಡುತ್ತಾ, ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಸರಕಾರಿ ಆಸ್ಪತ್ರೆಯಿಂದ ರೆಫರಲ್ ಆಗಿ ಮಂಗಳೂರಿನ ಖಾಸಗಿ ಮೆಡಕಲ್ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಅವರು ಕೊರೋನ ಪರೀಕ್ಷಾ ವರದಿ ಬಾರದೆ ಸುಮಾರು 8 ದಿನಗಳ ಕಾಲ ರೋಗಿಯನ್ನು ಸತಾಯಿಸಿದ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಪ್ರತಿಕ್ರಿಯಿಸಿ ಈಗಾಗಲೇ ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಗಳಿಂದ ನೇರ ವಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವಂತಿಲ್ಲ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಅಲ್ಲಿಂದ ನೇರವಾಗಿ ಜಿಲ್ಲಾ ಮಟ್ಟದ ಸರಕಾರಿ ಆ್ಪತ್ರೆಗೆ ಕಳುಹಿಸಬೇಕು ಎಂದರು.

ಆಯುಷ್ಮಾನ್ ಭಾರತ್ ಯೋಜನೆಯ ವೈದ್ಯಾಧಿಕಾರಿ ಡಾ. ರತ್ನಾಕರ್ ಮಾತನಾಡಿ, ರೋಗಿಯೊಬ್ಬ ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಸಿಗಬೇಕಾದರೆ, ಆ ರೋಗಿಯ ಪೂರ್ವ ತಪಾಸಣೆಯ ವೆಚ್ಚವನ್ನು ಭರಿಸಬೇಕಾಗುತ್ತದೆ. ಬಳಿಕ ರೋಗಿಯ ಸಂಬಂಧಪಟ್ಟ ಚಿಕಿತ್ಸೆಯು ಯೋಜನೆಯ ಮಾರ್ಗಸೂಚಿಯಂತೆ ನಡೆಯುತ್ತದೆ. ಮಾತ್ರವಲ್ಲದೆ ರೋಗಿಯು ಜನರಲ್ ವಾರ್ಡ್‌ ನಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದರೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಸೆಮಿ ಪ್ರೈವೇಟ್, ಅಥವಾ ಪ್ರೈವೇಟ್ ವಾರ್ಡ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವವರಿಗೆ ಆಯುಷ್ಮಾನ್ ಯೋಜನೆ ಅನ್ವುವಾಗುವುದಿಲ್ಲ ಎಂದು ವಿವರಿಸಿದರು.

ಈ ವಿಷಯ ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ. ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಉಚಿತ ಎಂದು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲಿ ಪೂರ್ವ ತಪಾಸಣೆ ಹೆಸರಿನಲ್ಲಿ ಹಣ ಪಾವತಿಸದೆ ಚಿಕಿತ್ಸೆ ಒದಗಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೈಯ್ಯಲ್ಲಿ ನಯಾ ಪೈಸೆ ಇಲ್ಲದೆ ಹೋದ ರೋಗಿ ಹಣ ಕಟ್ಟುವುದಾದರೂ ಹೇಗೆ? ಎಂದು ಮಮತಾ ಗಟ್ಟಿ ಸಭೆಯಲ್ಲಿ ಮತ್ತೆ ಕಳಕಳಿ ವ್ಯಕ್ತಪಡಿಸಿದರು.
ಆಯುಷ್ಮಾನ್ ಯೋಜನೆಯಡಿ ಪೂರ್ವ ತಪಾಸಣೆ ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿದ ಮಾರ್ಗಸೂಚಿ ಪಾಲಿಸಿ ವಿಷಯ. ಈ ಬಗ್ಗೆ ಸರಕಾರದಿಂದ ಸುತ್ತೋಲೆ ಆಗಿ ಬರಬೇಕಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಹೇಳಿದರು.

ವಿದೇಶಕ್ಕೆ ತೆರಳುವವರಿಗೆ ಕೊರೋನ ಶೀಘ್ರ ವರದಿ

ವಿದೇಶಕ್ಕೆ ತೆರಳುವವರಿಗೆ ಕೊರೋನ ತಪಾಸಣೆ ವಿಳಂಬವಾಗುತ್ತಿರುವುದರಿಂದ ತೊಂದರೆಯಾಗುತ್ತಿರುವ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷೆ  ಧನಲಕ್ಷ್ಮಿ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ವಿದೇಶಕ್ಕೆ ತೆರಳುವವರಿಗೆ ಕೊರೋನ ತಪಾಸಣೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ 1600 ರೂ.ಗಳಿಗೆ ಮಾಡಲಾಗುತ್ತಿದ್ದು, 8 ಗಂಟೆಯೊಳಗೆ ವರದಿ ನೀಡಲಾಗುತ್ತದೆ. ಆದರೆ ತಪಾಸಣೆ ಮಾಡಿಸುವಾಗ ಅವರು ವಿದೇಶಕ್ಕೆ ತೆರಳುವುದೆಂದು ಸ್ಪಷ್ಟವಾಗಿ ಹೇಳಬೇಕು ಎಂದರು.

ಸಹಜ ಸಾವಿನ ಸಂದರ್ಭ ಮೃತದೇಹವನ್ನು ಖಾಸಗಿ ಆಸ್ಪತ್ರೆಗಳಲ್ಲಿ ಇಡುವ ವ್ಯವಸ್ಥೆ ಇಲ್ಲದಿರುವ ಕುರಿತಂತೆ ಸದಸ್ಯರ ಪ್ರಸ್ತಾಪಕ್ಕೆ ಪ್ರತಿಕ್ರಿಯಿ ಸಿದ ಡಾ. ರಾಮಚಂದ್ರ ಬಾಯರಿ, ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 3 ಮೃತ ದೇಹಗಳನ್ನು ಇರಿಸುವ ಶೈತ್ಯಾಗಾರದ ವ್ಯವಸ್ಥೆಯನ್ನು ಮಾಡಿ ಸಲು ಚಿಂತಿಸಲಾಗಿದೆ ಎಂದರು.

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಮತಾ, ರವೀಂದ್ರ ಕಂಬಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News