ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡಗಳಿಗೆ ಎಸ್‌ಟಿಪಿ ಕಡ್ಡಾಯ
ಮಂಗಳೂರು, ಅ. 8: ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡ, ಕಾಂಪ್ಲೆಕ್ಸ್, ಹೊಟೇಲ್ ಸೇರಿದಂತೆ ವಾಣಿಜ್ಯ ಉದ್ಯಮಗಳ ದ್ರವ ತ್ಯಾಜ್ಯ ಸಂಸ್ಕರಣೆಗೆ ಸಂಬಂಧಪಟ್ಟವರು ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ಮೂರು ತಿಂಗಳ ಕಾಲಾವಕಾಶ ನೀಡಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಬಹು ಮಹಡಿ ಕಟ್ಟಡಗಳಿಂದ ದ್ರವ ತ್ಯಾಜ್ಯವನ್ನು ಚರಂಡಿ, ಕೆರೆ, ನದಿ ಹಾಗೂ ದಾರಿಗೆ ಬಿಡುತ್ತಿರುವ ಕುರಿತಂತೆ ಸದಸ್ಯರಿಂದ ಆರೋಪ ವ್ಯಕ್ತವಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ದ್ರವ ತ್ಯಾಜ್ಯವನ್ನು ಬೀದಿಗೆ ಬಿಡುವಂತಿಲ್ಲ. ಈ ಸಮಸ್ಯೆ ಬಹಳಷ್ಟಿರುವುದರಿಂದ, ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಒಂದು ವಾರದೊಳಗೆ ಪಟ್ಟಿ ತಯಾರಿಸಿ ವರದಿ ಪಡೆಯಲಾಗುವುದು. ಬಳಿಕ ನೋಟೀಸು ನೀಡಿ ಸಂಬಂಧಪಟ್ಟವರಿಗೆ ಎಸ್‌ಟಿಪಿ ರಚನೆಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗುವುದು. ಕ್ರಮ ಆಗದಿದ್ದಲ್ಲಿ ಕಟ್ಟಡ ಪರವಾನಿಗೆ ನವೀಕರಣ ಸಂದರ್ಭ ಪರವಾನಿಗೆ ರದ್ದುಪಡಿಸುವ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.