ಕೋವಿಡ್-19 ಸೋಂಕಿತ 50 ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ: ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯ ಸಾಧನೆ
ಉಡುಪಿ, ಅ.8: ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ 50 ಮಂದಿ ಗರ್ಭಿಣಿ ಮಹಿಳೆಯರ ಯಶಸ್ವಿ ಹೆರಿಗೆಗಳನ್ನು ನಡೆಸುವಲ್ಲಿ ಉಡುಪಿಯ ಡಾ. ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆ ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಪ್ರಸಿದ್ಧ ವೈದ್ಯ ಡಾ.ಶಶಿಕಿರಣ ಉಮಾಕಾಂತ್ ಪ್ರಕಟಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ 2020ರ ಮೇ 27ರಿಂದ ಅ.3ರವರೆಗೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು ಒಟ್ಟು 50 ಹೆರಿಗೆಗಳನ್ನು ನಡೆಸಿದ್ದು, 50ನೇ ಹೆರಿಗೆಯು ಇದೇ ಅ.3ರಂದು ನಡೆದಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19ರ ಕುರಿತು ಇತ್ತೀಚೆಗೆ ಪ್ರಕಟವಾದ ಅಧ್ಯಯನಗಳಿಂದ ನವಜಾತ ಶಿಶುಗಳಿಗೆ ಕೋವಿಡ್-19 ಸೋಂಕಿನಿಂದ ಅಪಾಯವಾಗುವ ಸಂಭವವಿರುವುದರಿಂದ, ಇಲ್ಲಿ ಜನಿಸಿದ ಶಿಶುಗಳನ್ನು ಕೋವಿಡ್ -19ರಿಂದ ಮುಕ್ತಗೊಳಿಸಲು ಆಸ್ಪತ್ರೆಯು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ತಾಯಿ ಮತ್ತು ಮಗು ಆರೋಗ್ಯವಾಗಿರಲು ಹಾಗೂ ಕೋವಿಡ್ ಮುಕ್ತಗೊಳಿಸಲು ಈ ಕ್ರಮವನ್ನು ಕೈಗೊಂಡಿತ್ತು ಎಂದು ಅವರು ಹೇಳಿದ್ದಾರೆ.
ಇಡೀ ಪ್ರಪಂಚವನ್ನು ಕೋವಿಡ್-19 ಆವರಿಸಿಕೊಂಡಿರುವ ಈ ಕಠಿಣ ಸಂದರ್ಭದಲ್ಲಿ, ಆಸ್ಪತ್ರೆಯು 50 ಆರೋಗ್ಯವಂತ ಶಿಶುಗಳನ್ನು ಯಾವುದೇ ಸಮಸ್ಯೆ, ತೊಂದರೆಗಳಿಲ್ಲದೆ ಜನಿಸಲು ಸಹಾಯ ಮಾಡಿದೆ ಎಂದು ಡಾ.ಶಶಿಕಾಂತ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ ಪ್ರಾಧ್ಯಾಪಕರಾದ ಡಾ.ಶಶಿಕಲಾ ಕೆ. ಭಟ್ ಎಲ್ಲಾ ಹೆರಿಗೆಗಳು ತ್ರಾಸದಾಯಕ ವಾಗಿರಲಿಲ್ಲ. ಹೊಸದಾಗಿ ಹುಟ್ಟಿದ ಶಿಶುಗಳನ್ನು ಮಕ್ಕಳ ವಿಭಾಗವು ಜಾಗರೂಕತೆಯಿಂದ ನೋಡಿಕೊಳ್ಳುತ್ತಿತ್ತು. ನವಜಾತ ಶಿಶುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿತ್ತು. ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಕೋವಿಡ್-19 ತೊಡಕುಗಳನ್ನು ರೋಗಿಗಳು ಎದುರಿಸಲಿಲ್ಲ ಎಂದು ನಾವು ಖಚಿತಪಡಿಸಿದ್ದೆವು ಎಂದು ಹೇಳಿದ್ದಾರೆ.
ಆಸ್ಪತ್ರೆಯ ಈ ಸಾಧನೆ ಬಗ್ಗೆ ಮಾತನಾಡಿದ ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ ಉಮಾಕಾಂತ್, ತಾಯಿ ಮತ್ತು ಮಗು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕೋವಿಡ್ ಸೋಂಕಿನ ಈ ಸಮಯದಲ್ಲಿ ಹೆಚ್ಚುವರಿ ಪ್ರಯತ್ನಗಳು ಬೇಕಾಗುತ್ತವೆ. ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳು ಮತ್ತು ರೋಗಿಗಳ ಆರೈಕೆ ನಿಯಮಾವಳಿ ಗಳೊಂದಿಗೆ ವೈದ್ಯರು ಮತ್ತು ಸಿಬ್ಬಂದಿ ಗಳು ಎಲ್ಲಾ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆಯನು್ನ ಯಶಸ್ವಿಯಾಗಿ ನಡೆಸಿದ್ದಾರೆ ಎಂದರು.
ಕೋವಿಡ್-19 ನಿಯಮಾವಳಿಗಳ ಪ್ರಕಾರ ಎಲ್ಲಾ ರೋಗಿಗಳನ್ನು ಸಂಪೂರ್ಣ ವಾಗಿ ಮೌಲ್ಯಮಾಪನ ಮಾಡಲಾಗಿದೆ. ಉಡುಪಿ ಜಿಲ್ಲಾಡಳಿತ ಮತ್ತು ಕರ್ನಾಟಕ ಸರಕಾರದ ಸಕ್ರಿಯ ಬೆಂಬಲದೊಂದಿಗೆ ನಾವು ಎಲ್ಲಾ ಕೋವಿಡ್- 19 ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಲು ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯನ್ನು ಮೀಸಲಿರಿಸಿದ್ದೇವೆ ಎಂದಿದ್ದಾರೆ.
ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆ 150 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿದ್ದು, ಇದನ್ನು ಸಂಪೂರ್ಣವಾಗಿ ಕೋವಿಡ್ -19 ಚಿಕಿತ್ಸೆಗೆ ಮೀಸಲಿಡಲಾಗಿದೆ. ಇದರಲ್ಲಿ 8 ತೀವ್ರ ನಿಗಾ ಘಟಕಗಳು, 10 ಎಚ್ಡಿಯು ಹಾಸಿಗೆಗಳು, 50 ಹಾಸಿಗೆಗಳ ಖಾಸಗಿ ಕೊಠಡಿಗಳು ಮತ್ತು 82 ಸಾಮಾನ್ಯ ವಾರ್ಡಿನ ಹಾಸಿಗೆಗಳ ಸೌಲಭ್ಯವಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.