×
Ad

ಶೀಘ್ರ ಮರಳು ಪೂರೈಕೆ ಮಾಡದಿದ್ದರೆ ಪ್ರತಿಭಟನೆ : ಕಟ್ಟಡ ನಿರ್ಮಾಣ ಕ್ಷೇತ್ರದ ವಿವಿಧ ಸಂಘಟನೆಗಳ ಎಚ್ಚರಿಕೆ

Update: 2020-10-08 19:48 IST

ಮಂಗಳೂರು, ಅ.8: ದ.ಕ.ಜಿಲ್ಲೆಯಲ್ಲಿ ಮರಳಿನ ಅಭಾವ ಸೃಷ್ಟಿಯಾಗಿರುವುದರಿಂದ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕೂಲಿ ಕಾರ್ಮಿಕನಿಂದ ಹಿಡಿದು ಇಂಜಿನಿಯರ್ಸ್‌, ಬಿಲ್ಡರ್ಸ್‌ಗಳು ಕೂಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಸಮಸ್ಯೆಯ ಪರಿಹಾರಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಅ.10ರೊಳಗೆ ಮರಳು ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕಟ್ಟಡ ನಿರ್ಮಾಣ ಕ್ಷೇತ್ರದ ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿದೆ.

ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕ್ರೆೆಡೈ, ಬಿಲ್ಡರ್ಸ್‌ ಅಸೋಸಿಯೇಶನ್, ಇಂಜಿನಿಯರ್ಸ್‌ ಅಸೋಸಿಯೇಶನ್, ಕೆನರಾ ಬಿಲ್ಡರ್ಸ್‌, ಸಿಮೆಂಟ್, ಸ್ಟೀಲ್, ಪೈಂಟ್ ಡೀಲರ್, ಹಾರ್ಡ್‌ವೇರ್ಸ್‌ ಅಸೋಸಿಯೇಶನ್ ಹಾಗೂ ಮರಳು ಸಾಗಾಟಗಾರರ ಒಕ್ಕೂಟದ ವತಿಯಿಂದ ಗುರುವಾರ ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಮಹಾಬಲ ಕೊಟ್ಟಾರಿ ಮಾತನಾಡಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಕಟ್ಟಡ ನಿರ್ಮಾಣ ಕ್ಷೇತ್ರವು ಮರಳಿನ ತೀವ್ರ ಅಭಾವದಿಂದ ಜಿಲ್ಲೆೆಯಲ್ಲಿ ಕಟ್ಟಡ ಕಾಮಗಾರಿಗಳು ಸ್ಥಗಿತವಾಗಿವೆ. ಪ್ರಸ್ತುತ 80ರಿಂದ 100ರಷ್ಟು ಬಹುಮಹಡಿ ಕಟ್ಟಡಗಳ ಸಹಿತ 500ಕ್ಕೂ ಅಧಿಕ ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, ಮರಳು ಸಿಗದೆ ಸಾವಿರಾರು ಕಾರ್ಮಿಕರ ಸಹಿತ ಮಾಲಕರು, ಗುತ್ತಿಗೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಸಚಿವರು, ಸಂಸದರು, ಶಾಸಕರಿಗೆ ಮನವಿಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ. ಅ.10ರಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಜಿಲ್ಲೆೆಗೆ ಆಗಮಿಸಲಿದ್ದು, ಅಂದು ಮರಳು ಲಭ್ಯತೆಯ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವ ಆಶಾಭಾವನೆಯಲ್ಲಿದ್ದೇವೆ. ಅಂದಿನ ಸಭೆಯ ಬಳಿಕ ಪ್ರತಿಭಟನೆಯ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಶನ್ ರಾಷ್ಟ್ರೀಯ ಉಪಾಧ್ಯಕ್ಷ ವಿಜಯ ವಿಷ್ಣು ಮಯ್ಯ ಮಾತನಾಡಿ, ಸಿಆರ್‌ಝಡ್   ವ್ಯಾಪ್ತಿಯಲ್ಲಿ ಪ್ರತಿವರ್ಷ ಅಕ್ಟೋಬರ್‌ನಲ್ಲಿ ಮರಳು ತೆಗೆಯಲು ಪರ್ಮಿಟ್ ನೀಡಲಾಗುತ್ತದೆ. ಆದರೆ ಈಗ ಒಂದು ವರ್ಷವಾದರೂ ಮರಳುಗಾರಿಕೆ ಆರಂಭಿಸಿಲ್ಲ. ರಾಜಕೀಯ, ಆಡಳಿತ ವ್ಯವಸ್ಥೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಅಧಿಕೃತ ಮರಳುಗಾರಿಕೆಗೆ ಅನುಮತಿ ನೀಡದೆ ಕಾನೂನು ಬಾಹಿರವಾಗಿ ರಾತ್ರೋ ರಾತ್ರಿ ಅಕ್ರಮ ಮರಳು ದಂಧೆ ನಡೆಸುವವರಿಗೆ ಉಪಯೋಗವಾಗಿದೆ. ಅಕ್ರಮ ಮರಳು ಲೋಡ್‌ಗೆ 20 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಮರಳುಗಾರಿಕೆಗೆ ಲೈಸನ್ಸ್ ನೀಡಿರುತ್ತಿದ್ದರೆ ಇಷ್ಟು ಅಗಾಧ ಪ್ರಮಾಣದಲ್ಲಿ ನಿರ್ಮಾಣ ಕ್ಷೇತ್ರ ನೆಲಕಚ್ಚುತ್ತಿರಲಿಲ್ಲ ಎಂದರು.

ಕ್ರೈಡೈ ಅಧ್ಯಕ್ಷ ನವೀನ್ ಕಾರ್ಡೋಜ ಮಾತನಾಡಿ, ಜನಪ್ರತಿನಿಧಿಗಳು, ಅಧಿಕಾರಿಗಳು ಮನಸ್ಸು ಮಾಡಿ ಮರಳುಗಾರಿಕೆಗೆ ಅನುಮತಿ ನೀಡಬಹುದಿತ್ತು. ನಮಗೆ ಮನವಿ ಮಾಡಿ ಸಾಕಾಗಿದೆ. ಕೊನೆಯ ಅಸ್ತ್ರವಾಗಿ ಬೀದಿಗಿಳಿಯುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.

ಮಂಗಳೂರು ಪೈಂಟ್ ಡೀಲರ್ಸ್‌ ಅಸೋಸಿಯೇಶನ ಮಹೇಶ್ ಮಾತನಾಡಿ, ಪ್ರತಿವರ್ಷ ಮೇ ತಿಂಗಳಿನಿಂದ ಜುಲೈವರೆಗೆ ಮರಳು ಅಭಾವ ಇರುತ್ತಿಿತ್ತು. ಆದರೆ ಈ ಬಾರಿ ಒಂದು ವರ್ಷವಾದರೂ ಮರಳು ಸಿಗುತ್ತಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಲು ಬಡವರಿಗೆ 2.20 ಲಕ್ಷ ರೂ. ಸಿಗುತ್ತದೆ. ಈ ಹಣದಿಂದ ದುಬಾರಿ ಅಕ್ರಮ ಮರಳಿಗೆ ಸುರಿದರೆ ಅವರು ಮನೆ ಕಟ್ಟುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿವಿಲ್ ಕಂಟ್ರಾಕ್ಟ್ ಅಸೋಸಿಯೇಶನ್‌ನ ರಾಮಕೃಷ್ಣ ರಾವ್, ಸಿಮೆಂಟ್ ಡೀಲರ್ಸ್‌ ಅಸೋಸಿಯೇಶನ್‌ನ ಪುರುಷೋತ್ತಮ ಶೆಣೈ, ದಿನಕರ ಸುವರ್ಣ, ಸರ್ವೋತ್ತಮ ಬಾಳಿಗ, ಸ್ಟೀಲ್ ಡೀಲರ್ಸ್‌ ಅಸೋಸಿಯೇಶನ್‌ನ ಮನ್ಸೂರ್ ಅಹ್ಮದ್ ಆಝಾದ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News