ಸುಳ್ಳು ಹೇಳಿ ಆದ ಮದುವೆ ತಿಂಗಳೊಪ್ಪತ್ತಿನಲ್ಲಿ ಬಯಲು

Update: 2020-10-08 16:50 GMT

ಗಂಗೊಳ್ಳಿ, ಅ.8: ಹಲವು ಸುಳ್ಳುಗಳನ್ನು ಹೇಳಿ ಮದುವೆಯಾದ ಯುವಕನೊಬ್ಬನ ಬಂಡವಾಳ ತಿಂಗಳೊಪ್ಪತ್ತಿನಲ್ಲೇ ಬಹಿರಂಗಗೊಂಡ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಹುಡುಗನ ಕಡೆಯವರ ಸುಳ್ಳಿಗೆ ಮೋಸ ಹೋದ ಪಡುಕೋಣೆ ಹಡವು ಗ್ರಾಮದ ಸ್ವಾತಿ (23) ಇದೀಗ ಗಂಡ, ಅತ್ತೆ, ಮಾವನ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ವಾತಿ ಅವರ ತಂದೆ-ತಾಯಿ ಗಂಡನ್ನು ಹುಡುಕುತ್ತಿರುವಾಗ ಅಂಪಾರು ಗ್ರಾಮದ ನೆಲ್ಲಿಕಟ್ಟೆಯ ಶಿವರಾಮ ಪೂಜಾರಿ ಎಂಬವರ ಪುತ್ರ ಶಿಥಿಲ್ ಪೂಜಾರಿ ನೆಂಟಸ್ತಿಕೆ ಬಂದಿತ್ತು. ಮದುವೆ ಮಾತುಕತೆಗೆ ಬಂದ ವರದ ಕಡೆಯವರು ಶಿಥಿಲ್‌ಗೆ ಮೆಸ್ಕಾಂ ಇಲಾಖೆಯಲ್ಲಿ ಸರಕಾರಿ ಕೆಲಸ ಇರುವು ದಾಗಿ ನಂಬಿಸಿ ಹುಡುಗಿಗೆ 12 ಪವನ್ ಚಿನ್ನ ಹಾಗೂ ಹುಡುಗನಿಗೆ 2 ಪವನ್ ಚಿನ್ನ ಹಾಕಿ ಮದುವೆ ಮಾಡಿಕೊಡಲು ಮಾತುಕತೆ ನಡೆಯಿತು.

ಜು.30ರಂದು ಹುಡುಗಿಯ ಮರವಂತೆ ಹೊಸಮನೆಯಲ್ಲಿ ನಿಶ್ಚಿತಾರ್ಥ ಹಾಗೂ ಆಗಸ್ಟ್ 26ರಂದು ಅಂಪಾರು ಶ್ರೀರಾಮ ಸಭಾ ಭವನದಲ್ಲಿ ಮದುವೆಯೂ ಹಿಂದೂ ಸಂಪದ್ರಾಯದಂತೆ ನಡೆಯಿತು. ಮದುವೆ ನಂತರ ಶಿಥಿಲ್ ತನಗೆ ಬೆಂಗಳೂರಿಗೆ ವರ್ಗವಾಗಿದೆ ಎಂದು ಹೇಳಿ ಹೆಂಡತಿಯನ್ನು ಕರೆದುಕೊಂಡು ಸೆ.4ರಂದು ಬೆಂಗಳೂರಿಗೆ ತೆರಳಿ ಬಸವೇಶ್ವರ ನಗರದಲ್ಲಿ ಬಾಡಿಗೆ ರೂಮನ್ನು ಮಾಡಿ ಇರತೊಡಗಿದ.

ಪ್ರತಿದಿನ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಗೆ ಹೋಗುತಿದ್ದ ಶಿಥಿಲ್ ಮಧ್ಯಾಹ್ನ ಮನೆಗೆ ಬಂದು ನಂತರ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದರಿಂದ ಸಂಶಯಗೊಂಡ ಸ್ವಾತಿ, ಕೆಲಸ ಇರುವ ಬಗ್ಗೆ, ಗುರುತು ಚೀಟಿ ತೋರಿಸುವಂತೆ ಕೇಳಿದಾಗ ಹಾರಿಕೆ ಉತ್ತರ ನೀಡಿದ್ದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಆತನ ಮೊಬೈಲ್ ಪರಿಶೀಲನೆಗೆ ಮುಂದಾದಾಗ ಬೈದು ಬೆದರಿಕೆ ಹಾಕಿದ್ದ. ಅಲ್ಲದೇ ತವರು ಮನೆಯಿಂದ ವರದಕ್ಷಿಣೆ ತರುವಂತೆಯೂ ಮಾನಸಿಕ ಹಿಂಸೆ ನೀಡತೊಡಗಿದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಒಮ್ಮೆ ಮನೆಯಿಂದ ಹಣ ತರಿಸಿ ನೀಡಿದ್ದು, ಈ ಹಣವನ್ನು ತೆಗೆದುಕೊಂಡು ರಾಯಚೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮತ್ತೆ ವಾಪಾಸಾಗಲಿಲ್ಲ.

ಬಳಿಕ ಸ್ವಾತಿ ಮನೆಯವರಿಗೆ ವಿಷಯ ತಿಳಿಸಿದ್ದು, ಆತನ ಮನೆಯವರಿಗೆ ವಿಷಯ ತಿಳಿಸಿ ಆತನ ಪತ್ತೆಗಾಗಿ ಹುಡುಕಾಡಿದಾಗ ಆತನ ಗೋಕಾಕ್‌ ನಿಂದ ಕುಂದಾಪುರಕ್ಕೆ ಬರುತ್ತಿರುವ ಮಾಹಿತಿ ಕಲೆ ಹಾಕಿ ಆತನನ್ನು ವಿಚಾರಿಸಿದಾಗ ಯಾವುದೇ ಸರಕಾರಿ ಕೆಲಸವಿಲ್ಲದೇ ಆತ ಕೂಲಿ ಕೆಲಸ ಮಾಡುತ್ತಿರುವುದು ಬಹಿರಂಗ ಗೊಂಡಿತ್ತು. ವರದಕ್ಷಿಣೆ ಹಣಕ್ಕಾಗಿ ತನಗೆ ಮೆಸ್ಕಾಂನಲ್ಲಿ ಕೆಲಸ ಇರುವಾಗಿ ನಂಬಿಸಿ ವಂಚಿಸಲಾಗಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News