ಹಣಕಾಸಿನ ವಿಚಾರದಲ್ಲಿ ಹಲ್ಲೆ: ನಾಲ್ವರ ಬಂಧನ
Update: 2020-10-08 23:14 IST
ಮಂಗಳೂರು, ಅ.8: ನಗರದ ಚಿಲಿಂಬಿಯಲ್ಲಿ ಬುಧವಾರ ಸಂಜೆ ಹಣಕಾಸಿನ ವಿಚಾರದಲ್ಲಿ ಹೊಡೆದಾಟ ನಡೆದಿದ್ದು, ಈ ಬಗ್ಗೆ ಹಲ್ಲೆ ಆರೋಪದ ಮೇಲೆ ನಾಲ್ವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಚಿಲಿಂಬಿಯ ಕೋರಿ ರಕ್ಷಿತ್ (35) ಈ ಹೊಡೆದಾಟದಲ್ಲಿ ಗಾಯಗೊಂಡಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಹೊಸಬೆಟ್ಟು ನಿವಾಸಿ ಚಂದು ಯಾನೆ ಚಂದ್ರಹಾಸ ಶೆಟ್ಟಿ (40), ಕೊಟ್ಟಾರ ಚೌಕಿ ನಿವಾಸಿಗಳಾದ ಕಮಲಾಕ್ಷ (42), ಡೆನ್ನಿಸ್ (26), ವಿಶ್ವಾಸ್ (26) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಿ ರಕ್ಷಿತ್ ಮತ್ತು ಆರೋಪಿಗಳು ಈ ಮೊದಲು ಜತೆಯಾಗಿ ಇದ್ದು, ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾದ್ದರಿಂದ ಹೊಡೆದಾಟ ನಡೆದಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.