ಶೀಲ ಶಂಕಿಸಿ ಪತ್ನಿಯ ಕೊಲೆಗೆ ಯತ್ನ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ

Update: 2020-10-09 14:49 GMT

ಕುಂದಾಪುರ, ಅ.9: ಶೀಲ ಶಂಕಿಸಿ ಪತ್ನಿಯ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿ ಪತಿಗೆ ಕುಂದಾಪುರದಲ್ಲಿನ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾ ಲಯ 7 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಗುರು ವಾರ ಆದೇಶ ನೀಡಿದೆ.

ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಚರ್ಚ್ ರಸ್ತೆಯ ಜಂಕ್ಷನ್ ಬಳಿಯ ನಿವಾಸಿ ಚಂದ್ರ ಪೂಜಾರಿ ಎಂಬಾತ ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಈತ 2016ರ ಫೆಬ್ರವರಿ 19ರಂದು ತನ್ನ ಪತ್ನಿಯ ಬಗ್ಗೆ ಅನುಮಾನಿಸಿ ಆಕೆಯನ್ನು ಚೂರಿಯಿಂದ ಚುಚ್ಚಿ ಮಾರಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದನು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶ ನರಹರಿ ಪ್ರಭಾಕರ್ ಮರಾಠೆ, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಆರೋಪಿಯನ್ನು ದೋಷಿ ಎಂಬುದಾಗಿ ಘೋಷಿಸಿದರು. ಆರೋಪಿಗೆ ಸೆಕ್ಷನ್ 307(ಕೊಲೆ ಯತ್ನ) ಪ್ರಕರಣಕ್ಕೆ 7ವರ್ಷ ಸಜೆ, 25 ಸಾವಿರ ರೂ. ದಂಡ ಹಾಗೂ ಸೆಕ್ಷನ್ 504 (ಅವ್ಯಾಚವಾಗಿ ಬೈದಿದ್ದಕ್ಕೆ) ಒಂದು ಸಾವಿರ ದಂಡ ವಿಧಿಸಿ, ನೊಂದ ಪತ್ನಿಗೆ 20 ಸಾವಿರ ರೂ. ಪರಿಹಾರ ನೀಡಲು ನ್ಯಾಯಾಧೀಶರು ಆದೇಶ ನೀಡಿದರು. ಪ್ರಾಸಿಕ್ಯೂಶನ್ ಪರ ಉಡುಪಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News