ನಾನು ವೆಲ್ ನೆಸ್ ಹೆಲ್ಪ್ ಲೈನ್ ಸಂಘಟನೆಯ ಫಲಾನುಭವಿ : ಪ್ರತಾಪ್ ಸಿಂಹ ನಾಯಕ್

Update: 2020-10-09 15:29 GMT

ಮಂಗಳೂರು, ಅ. 9: ಕೊರೋನ ಸಂದರ್ಭದಲ್ಲಿ ರಕ್ತ ದಾನದ ಮೂಲಕ ಜನರ ಜೀವ ಉಳಿಸುತ್ತಿರುವ ವೆಲ್ ನೆಸ್ ಹೆಲ್ಪ್ ಲೈನ್ ಸಂಘಟನೆಗೆ ನನ್ನ ಅಭಿನಂದನೆಗಳು, ನಾನು ಈ ಸಂಘಟನೆಯ ಓರ್ವ ಫಲಾನುಭವಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್  ಹೇಳಿದರು.

ಅವರು ಇಂದು ನಗರದ ಅತ್ತಾವರ ಹಿದಾಯ ಫೌಂಡೇಶನ್ ಕಚೇರಿಯ ಆವರಣದಲ್ಲಿ ವೆಲ್ ನೆಸ್ ಹೆಲ್ಪ್ ಲೈನ್ ಮೂಲಕ ಹಮ್ಮಿಕೊಂಡ 150ನೆ ಪ್ಲಾಸ್ಮಾ ದಾನದ ಮೂಲಕ ಮಾನವೀಯತೆ ಮೆರೆದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ನನ್ನ ಬಾವ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ರಕ್ತದ ಅಗತ್ಯ ಇತ್ತು. ಆ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರನ್ನು ಸಂಪರ್ಕಿಸಿದಾಗ ವೆಲ್ ನೆಸ್ ಹೆಲ್ಪ್ ಲೈನ್  ಸಂಘಟನೆಯ ಬಗ್ಗೆ ತಿಳಿಸಿದರು. ಈ ವೇಳೆ ಅವರನ್ನು ಸಂಪರ್ಕಿಸಿದಾಗ ತಕ್ಷಣ ಸಂಘಟನೆಯ ಇಬ್ಬರು ಯುವಕರು ಬಂದು ಪ್ಲಾಸ್ಮಾ ದಾನ ಮಾಡಿ ಸಹಾಯ ಮಾಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಕ್ರತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರತಾಪ್ ಸಿಂಹ ನಾಯಕ್ ಪ್ಲಾಸ್ಮಾ ದಾನಿಗಳನ್ನು ಅಭಿನಂದಿಸಿ, ಶುಭ  ಹಾರೈಸಿದರು.

ಸಮಾಜದ ಎಲ್ಲಾ ಜನ ಸಮುದಾಯವನ್ನು ಸಂಕಷ್ಟಕ್ಕೆ ಈಡು ಮಾಡಿರುವ ಕೊರೋನವನ್ನು ಎದುರಿಸಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಅವರು ಕರೆ ನೀಡಿದರು.

ಸಮಾರಂಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಸದಾಶಿವ ಶ್ಯಾನ್ ಭೋಗ್, ಡಾ. ತಾಜುದ್ದೀನ್,  ಡಾ. ಜನಾರ್ದನ ಕಾಮತ್, ಡಾ. ಪ್ರೀಯಾ ಬಲ್ಲಾಳ್, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ. ಗಿರಿಧರ್ ಮೊದಲಾದ ವೈದ್ಯರುಗಳು ಉಪಸ್ಥಿತರಿದ್ದರು.

ಹಿದಾಯ ಫೌಂಡೇಶನ್ ನ ಅಧ್ಯಕ್ಷ ಮನ್ಸೂರ್ ಅಝಾದ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸುಮಾರು 150ಕ್ಕೂ ಅಧಿಕ ಪ್ಲಾಸ್ಮಾ ದಾನಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವೆಲ್ ನೆಸ್ ಹೆಲ್ಪ್ ಲೈನ್ ಸಂಘಟನೆಯ ಸಂಚಾಲಕ ಖಾಸಿಂ ಅಹ್ಮದ್ ದಿಕ್ಸೂಚಿ ಭಾಷಣ ಮಾಡಿದರು. ಸಲೀಂ ಕಿರಾಅತ್ ಪಠಿಸಿದರು. ರಫೀಕ್ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ನಂತರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News