ಯುದ್ಧದಲ್ಲಿ ತೊಡಗಿರುವ ಆರ್ಮೇನಿಯ, ಅಝರ್‌ಬೈಜಾನ್ ಮಾತುಕತೆಗೆ ಒಪ್ಪಿಗೆ: ರಶ್ಯ

Update: 2020-10-09 16:17 GMT

ಮಾಸ್ಕೋ (ರಶ್ಯ), ಅ. 9: ವಿವಾದಾಸ್ಪದ ನಗೋರ್ನೊ-ಕರಬಾಖ್ ವಲಯಕ್ಕಾಗಿ ಭೀಕರ ಯುದ್ಧದಲ್ಲಿ ತೊಡಗಿರುವ ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳು, ಯುದ್ಧವನ್ನು ನಿಲ್ಲಿಸುವ ನಿಟ್ಟಿನಲ್ಲಿ ಮೊದಲ ಮಾತುಕತೆಗಳನ್ನು ನಡೆಸಲು ಒಪ್ಪಿಕೊಂಡಿವೆ.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ತಡ ರಾತ್ರಿ ಮಾಡಿಕೊಂಡ ಮನವಿಯ ಮೇರೆಗೆ, ಎರಡು ದೇಶಗಳ ಹಿರಿಯ ರಾಜತಾಂತ್ರಿಕರು ರಶ್ಯ ರಾಜಧಾನಿಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ರಶ್ಯದ ವಿದೇಶ ಸಚಿವಾಲಯ ತಿಳಿಸಿದೆ.

‘‘ಮಾತುಕತೆಯಲ್ಲಿ ಪಾಲ್ಗೊಳ್ಳುವುದನ್ನು ಬಾಕು ಮತ್ತು ಯೆರೆವಾನ್ ಖಚಿತಪಡಿಸಿವೆ’’ ಎಂದು ವಿದೇಶ ಸಚಿವಾಲಯದ ವಕ್ತಾರೆ ಮರಿಯಾ ಝಖರೊವ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಈ ನಿಟ್ಟಿನಲ್ಲಿ ಸಿದ್ಧತೆಗಳು ಆರಂಭಗೊಂಡಿವೆ ಎಂದರು.

ಭೀಕರ ಯುದ್ಧ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನವರೆಗೂ ಮುಂದುವರಿದಿದೆ ಎಂದು ಆರ್ಮೇನಿಯ ಮತ್ತು ಅಝರ್‌ಬೈಜಾನ್‌ನ ರಕ್ಷಣಾ ಅಧಿಕಾರಿಗಳು ತಿಳಿಸಿದರು. ಯುದ್ಧದಲ್ಲಿ ಇನ್ನಷ್ಟು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

1990ರ ದಶಕದಲ್ಲಿ ಆರ್ಮೇನಿಯ ಮತ್ತು ಅಝರ್‌ಬೈಜಾನ್ ನಡುವೆ ಯದ್ಧ ನಡೆದ ಬಳಿಕ, ನಗೋರ್ನೊ-ಕರಬಾಖ್ ತನ್ನನ್ನು ತಾನು ಸ್ವತಂತ್ರ ಎಂಬುದಾಗಿ ಘೋಷಿಸಿಕೊಂಡಿತ್ತು. ಈ ವಲಯದ ಒಡೆತನಕ್ಕಾಗಿ ಕಳೆದ ತಿಂಗಳು ಆರ್ಮೇನಿಯ ಪ್ರತ್ಯೇಕತಾವಾದಿಗಳು ಮತ್ತು ಅಝರ್‌ಬೈಜಾನ್ ಸೈನಿಕರ ನಡುವೆ ಸಂಘರ್ಷ ಮತ್ತೆ ಭುಗಿಲೆದ್ದಿದೆ.

ಈವರೆಗಿನ ಯುದ್ಧದಲ್ಲಿ ಹತ್ತಾರು ನಾಗರಿಕರು ಸೇರಿದಂತೆ ಸುಮಾರು 400 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News