ದೇರಳಕಟ್ಟೆ : ನಿಟ್ಟೆ ವಿವಿ 10ನೇ ಘಟಿಕೋತ್ಸವ

Update: 2020-10-09 16:45 GMT

ಕೊಣಾಜೆ : ಸದ್ಯದ ಪರಿಸ್ಥಿತಿಯಲ್ಲಿ ಮನುಷ್ಯನ ಸ್ವಾರ್ಥದಿಂದ ಪರಿಸರದ ಮೇಲಾಗುತ್ತಿರುವ ದಾಳಿಯ ಕಾರಣದಿಂದಾಗಿ ಮನುಷ್ಯ ಬದುಕುವ ಸ್ಥಿತಿ ಅಪಾಯಕಾರಿಯಾಗಿದೆ  ಎಂದು ಸ್ವಿಝರ್ ಲ್ಯಾಂಡ್ ನ ಜಿನೇವಾ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯದ ಹತ್ತನೇ ವರ್ಷದ ಘಟಿಕೋತ್ಸ ವವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪರಿಸರ ಅದರಲ್ಲೂ ಜಾಗತಿಕ‌ ತಾಪಮಾನ, ಪ್ರವಾಹ, ಕ್ಷಾಮ, ಬರ, ಅತಿವೃಷ್ಟಿ, ಅನಾವೃಷ್ಟಿಗಳು ಜನರ ಬದುಕಿಗೆ ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಪರಿಸರವನ್ನು ಹಸಿರುಮಯವಾಗಿಸುವುದೊಂದೇ ನಮಗೆ ಉಳಿದಿರುವ ದಾರಿ ಎಂದರು.

ಈ ಸಾಲಿನ ವೈದ್ಯಕೀಯ ಪದವೀಧರರಿಗೆ ಬಹಳಷ್ಟು ಸವಾಲುಗಳು ಎದುರಾಗಲಿದೆ. ಕೊರೋನ ಹರಡಿದ ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರ ಬದಲಾವಣೆ ಆಗಿದೆ. ಕೇವಲ ಆರು ತಿಂಗಳಲ್ಲಿ ಸಂಶೋಧಿಸಿರುವ ಔಷಧಿಗಳು ಮನುಷ್ಯನ‌ ದೇಹ ಸೇರುವಂತಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಇಂತಹ‌ ಆವಿಷ್ಕಾರ ನಡೆಯುತ್ತಿದೆ ಎಂದರು.

ಕೋವಿಡ್ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ನಲ್ವತ್ತು ಹೆಸರಾಂತ ತಂತ್ರಜ್ಞಾನ ಸಂಸ್ಥೆಯ ಜೊತೆಗೆ 25ರಿಂದ 26ಭಾಷೆಗಳಲ್ಲಿ ಸಂವಹನ‌ ನಡೆಸುತ್ತಿದೆ. ಜನರು ಔಷಧಿಗಳ ಕುರಿತಾಗಿಯೇ ಪ್ರಶ್ನೆ ಮತ್ತು‌ ಸವಾಲು ಹಾಕುತ್ತಿದ್ದು ಜನರಲ್ಲಿ ಕೊರೋನ ಬಗ್ಗೆ ಭೀತಿ ಇಲ್ಲದಿರುವುದು, ಜೀವಕ್ಕೆ ಅಪಾಯವಾಗದು ಎಂಬ ವಿಪರೀತ ಆತ್ಮವಿಶ್ವಾಸದ ಕಾರಣದಿಂದ ಕೊರೋನ ನಿಯಂತ್ರಣ ತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಿಟ್ಟೆ ವಿವಿಯ ಶೈಕ್ಷಣಿಕ ಸಹ ಕುಲಾಧಿಪತಿ ಡಾ. ಎಂ.ಶಾಂತಾರಾಮ್ ಶೆಟ್ಟಿ ಮಾತನಾಡಿ ನಿಟ್ಟೆ ವಿವಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಮಾನವೀಯತೆಯನ್ನು‌ ಬೋಧಿಸುವ ಸಂಸ್ಥೆಯಾಗಿ ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಿದೆ ಎಂದರು.

ಉಪ ಕುಲಪತಿ ಪ್ರೊ .ಎಮ್. ಎಸ್ ಮೂಡಿತ್ತಾಯ ಅವರು ನಿಟ್ಟೆ ವಿವಿಯಿಂದ ಡಾಕ್ಟರ್ ಆಫ್ ಸೈನ್ಸ್ ಗೌರವಕ್ಕೆ ಪಾತ್ರರಾದ  ರಾಜಸ್ತಾನದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಕೆ. ಕಸ್ತೂರಿ ರಂಗನ್ ಅವರನ್ನು ಪರಿಚಯಿಸಿದರು.

 ನಿಟ್ಟೆ ವಿವಿ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಘಟಿಕೋತ್ಸವ ನಡೆಸಿಕೊಟ್ಟರು.

ನಿಟ್ಟೆ ವಿವಿ ಆಡಳಿತ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ,  ರಿಜಿಸ್ಟ್ರಾರ್ ಡಾ. ಅಲ್ಕಾ ಕುಲಕರ್ಣಿ, ಕ್ಷೇಮ ಡೀನ್ ಡಾ.ಪಿ.ಎಸ್. ಪ್ರಕಾಶ್, ವೈಸ್ ಡೀನ್ ಡಾ.  ಜಯಪ್ರಕಾಶ್ ಶೆಟ್ಟಿ ಹಾಗೂ  ಡಾ. ಅಮೃತ್ ಮಿರಾಜ್ಕರ್,  ಫಿಸಿಯೋಥೆರಪಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಧಾನೇಶ್ ಕುಮಾರ್ ಸೇರಿ ದಂತೆ ನಿಟ್ಟೆ ವಿವಿ ಅಂಗ ಸಂಸ್ಥೆಯ ಕಾಲೇಜುಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ. ಕೆ. ಕಸ್ತೂರಿ ರಂಗನ್ ಅವರಿಗೆ ಗೌರವ ಡಾಕ್ಟರೇಟ್ ಸೇರಿದಂತೆ ಪಿಎಚ್ ಡಿ 13, ಮೆಡಿಸಿನ್ 242, ದಂತ ವಿಜ್ಞಾನ 147, ಔಷಧೀಯ ವಿಜ್ಞಾನ 185, ನರ್ಸಿಂಗ್ 117, ಫಿಸಿಯೋಥೆರಪಿ 79, ಎಂಪಿಎಚ್ 1, ಎಂಫಿಎಲ್ 2, ಎಂಐಟಿ 31, ಎ ಆ್ಯಂಡ್ ಒಟಿಟಿ 35, ಎಮ್ ಎಲ್ ಟಿ 23, ಹ್ಯುಮ್ಯಾನಿಟೀಸ್ 43, ಬಯೋಲಾಜಿಕಲ್ ಸೈನ್ಸಸ್ 58, ಬಿ. ಆರ್ಕ್ ನ 30 ಮಂದಿ ಒಳಗೊಂಡು 1007ಮಂದಿಗೆ ಪದವಿ ಪ್ರದಾನ ಮಾಡಲಾಯಿತು.

ಪರೀಕ್ಷಾಂಗ ಕುಲಸಚಿವ ಡಾ. ಪ್ರಸಾದ್ ಬಿ ಶೆಟ್ಟಿ ಅವರು ಪ್ರತಿಭಾವಂತರು ಹಾಗೂ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಹೆಸರು ವಾಚಿಸಿದರು.‌ ನಿಟ್ಟೆ ಕುಲಪತಿ ಪ್ರೊ.ಡಾ. ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News