ಹತ್ರಸ್: ಸಂತ್ರಸ್ತೆಯ ಮನೆಗೆ ಬಿಗು ಭದ್ರತೆ; ಸಿಸಿಟಿವಿ ಅಳವಡಿಕೆ, 60 ಪೊಲೀಸರ ನಿಯೋಜನೆ

Update: 2020-10-09 16:59 GMT

ಲಕ್ನೊ, ಅ.9: ಹತ್ರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ದಲಿತ ಮಹಿಳೆಯ ಮನೆಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು 8 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಮಹಿಳಾ ಸಿಬ್ಬಂದಿ ಸಹಿತ 60 ಪೊಲೀಸರನ್ನು ಕುಟುಂಬದವರ ರಕ್ಷಣೆಗೆ ನಿಯೋಜಿಸಲಾಗಿದೆ ಎಂದು ಡಿಐಜಿ ಶಲಭ್ ಮಾಥುರ್ ಶುಕ್ರವಾರ ಹೇಳಿದ್ದಾರೆ.

ಅಗತ್ಯಬಿದ್ದರೆ ಹತ್ರಸ್‌ನಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಯನ್ನೂ ಆರಂಭಿಸಲಾಗುವುದು ಎಂದು ನೋಡಲ್ ಅಧಿಕಾರಿಯಾಗಿರುವ ಮಾಥುರ್ ಹೇಳಿದ್ದಾರೆ. 12 ಗಂಟೆಯ ಶಿಫ್ಟ್‌ನಂತೆ 60 ಪೊಲೀಸರು ಮನೆಯವರಿಗೆ ರಕ್ಷಣೆ ಒದಗಿಸಲಿದ್ದಾರೆ. ಅಲ್ಲದೆ ಸಿಸಿಟಿವಿ ಹಾಗೂ ಪೊಲೀಸ್ ಭದ್ರತೆಯ ಮೇಲುಸ್ತುವಾರಿಯನ್ನು ನಿರ್ವಹಿಸಲು ಗಝೆಟೆಡ್ ಅಧಿಕಾರಿಯನ್ನೂ ನಿಯೋಜಿಸಲಾಗಿದೆ ಎಂದವರು ಹೇಳಿದ್ದಾರೆ. ಮನೆಗೆ ಭೇಟಿ ನೀಡುವವರ ಮಾಹಿತಿ ನಮೂದಿಸಲು ಸಂದರ್ಶಕರ ಪುಸ್ತಕವನ್ನು ಮನೆಯ ಪ್ರವೇಶದ್ವಾರದ ಬಳಿ ಇರಿಸಲಾಗಿದೆ. ಕುಟುಂಬದ ಸದಸ್ಯರಿಗೆ ಹಾಗೂ ಪ್ರಕರಣದ ಸಾಕ್ಷಿಗಳಿಗೆ ಭದ್ರತೆ ಒದಗಿಸಲು 2 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಅಗ್ನಿಶಾಮಕ ದಳದ ಒಂದು ತಂಡ ಹಾಗೂ ಇಬ್ಬರು ಗುಪ್ತಚರ ಸಿಬಂದಿಯನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ. ಮನೆಯ ಪ್ರವೇಶ ದ್ವಾರದಲ್ಲಿ ಲೋಹಶೋಧಕ ಅಳವಡಿಸಲಾಗಿದೆ. ಕ್ಷಿಪ್ರ ಕಾರ್ಯಪಡೆಯನ್ನೂ ಸಜ್ಜಾಗಿ ಇರಿಸಲಾಗಿದೆ ಎಂದು ಹತ್ರಸ್ ಪೊಲೀಸ್ ಅಧೀಕ್ಷಕ ವಿನೀತ್ ಜೈಸ್ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News