ಕ್ಯಾಂಪ್ಕೋ : ನೂತನ ಸೌರ ವಿದ್ಯುತ್ ಉತ್ಪಾದನಾ ಘಟಕ ಉದ್ಘಾಟನೆ
ಪುತ್ತೂರು: ಕ್ಯಾಂಪ್ಕೋ ಸಂಸ್ಥೆಯು ಕೃಷಿಕರ ಅಭಿವೃದ್ಧಿಗೆ ಪೂರಕವಾಗಿ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ `ಕ್ಯಾಂಪ್ಕೋ ಆನ್ ವೀಲ್' ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಮುಂದಿನ ಮೂರು ತಿಂಗಳೊಳಗಾಗಿ ಈ ಯೋಜನೆ ಅನುಷ್ಠಾನ ಗೊಳ್ಳಲಿದ್ದು ಸಂಸ್ಥೆಯು ಮನೆಮನೆಗೆ ತೆರಳಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ಅವರು ಶುಕ್ರವಾರ ಪ್ರತಿಷ್ಠಿತ ಬಹುರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ಹಾಗೂ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ವತಿಯಿಂದ ಚಾಕಲೇಟು ಫ್ಯಾಕ್ಟರಿ ಕಟ್ಟಡದ ಮೇಲ್ಚಾವಣಿಯಲ್ಲಿ ನಿರ್ಮಿಸಲಾಗಿರುವ 500 ಕೆ.ವಿ. ಸೌರ ವಿದ್ಯುತ್ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಯಾಂಪ್ಕೋ ಸಂಸ್ಥೆಯು ಪುತ್ತೂರು ತಾಲೂಕಿನ ಕಾವು ಎಂಬಲ್ಲಿ ಸುಮಾರು ರೂ. 25 ಕೋಟಿ ವೆಚ್ಚದಲ್ಲಿ ಕಾಳುಮೆಣಸು ಖರೀದಿ ಮತ್ತು ಸಂಸ್ಕರಣಾ ಘಟಕವನ್ನು ಸ್ಥಾಪಿಸುತ್ತಿದ್ದು, ಮುಂದಿನ ಜನವರಿ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದ ಅವರು ಇದರೊಂದಿಗೆ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಯಾಂಪ್ಕೋ ಸಂಸ್ಥೆಯು ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಮಣ್ಣು ತಪಾಸಣೆ ಮಾಡುವ `ಸ್ವಾಯಿಲ್ ಕಾರ್ಡ್' ಪರಿಚಯಿಸಲಿದೆ. ಇದು ರೈತರಿಗೆ ವರದಾನವಾಗಲಿದೆ. ಅನಾರೋಗ್ಯಕ್ಕೀಡಾಗುವ ಸಂಸ್ಥೆಯ ಸದಸ್ಯರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಸೌರ ವಿದ್ಯುತ್ ಘಟಕ ಉದ್ಘಾಟಿಸಿ, ಗ್ರಾಮೀಣ ಪ್ರದೇಶ ದೇಶದ ಶಕ್ತಿ. ಆದರೆ, ಕೆಲವು ವರ್ಷದ ಹಿಂದಿನವರೆಗೂ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಗೆ ಅಸಡ್ಡೆಯನ್ನು ತೋರಲಾಗುತ್ತಿತ್ತು. ಕೇವಲ ನಗರ ಪ್ರದೇಶಗಳಿಗಷ್ಟೇ 24 ತಾಸುಗಳ ಕಾಲ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ ಇದೀಗ ಗ್ರಾಮೀಣ ಪ್ರದೇಶಗಳಿಗೆ, ಕೃಷಿ ಚಟುವಟಿಕೆಗಳಿಗೆ ನಿರಂತರ ವಿದ್ಯುತ್ ಪೂರೈಸಲು ಆದ್ಯತೆ ನೀಡಲಾಗುತ್ತಿದೆ. ರಾಷ್ಟ್ರದ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ರೈತರ ಕೃಷಿ ಚಟುವಟಿಕೆಗಳು ದ್ವಿಗುಣಗೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ದೇಶವು ಕಳೆದ ಸುಮಾರು 6 ವರ್ಷಗಳಿಂದೀಚೆಗೆ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಲಾಗುತ್ತಿದೆ. ಆದರೆ ವಿಪರ್ಯಾಸವೆಂಬಂತೆ ಇಂದಿನ ಜನಾಂಗ ವೈಭವೋಪೇತ ಜೀವನದತ್ತ ಆಕರ್ಷಿತವಾಗುತ್ತಿದೆ. ಯಾವ ರೀತಿಯಲ್ಲಿ ನೆಮ್ಮದಿಯ ಜೀವನ ಸಾಗಿಸಬೇಕು ಎಂಬ ಸೂಕ್ತ ಮಾರ್ಗದರ್ಶನವಿಲ್ಲದೆ ಹಣಗಳಿಯೇ ಏಕೈಕ ಉದ್ದೇಶವಾಗಿ ಬಿಟ್ಟಿದೆ. ಮಾತ್ರವಲ್ಲದೇ, ಕೃಷಿ ಕ್ಷೇತ್ರದಲ್ಲೂ ಇಂತಹ ವಾತಾವರಣ ಕಂಡು ಬರುತ್ತಿದ್ದು, ಒಮ್ಮೆಲೇ ಅಧಿಕ ಇಳುವರಿ ಗಳಿಸಬೇಕೆಂಬ ದುರಾಸೆಯಿಂದ ಭೂಮಿಗೆ ವಿಷವನ್ನು ಹಾಕಲಾಗುತ್ತಿದೆ. ಇಂತಹ ಮನೋಸ್ಥಿತಿ ಬದಲಾಗಬೇಕಾಗಿದೆ ಎಂದರು.
ಆರ್ಬ್ ಎನರ್ಜಿ ಕಂಪೆನಿಯ ಉಪಾಧ್ಯಕ್ಷ ಸುಧೀಂದ್ರ ತೆಕ್ಕಟ್ಟೆ ಮಾತನಾಡಿ, ಕ್ಯಾಂಪ್ಕೋ ಸಂಸ್ಥೆಯು ಪುತ್ತೂರು ತಾಲೂಕಿನಲ್ಲಿಯೇ ಅತೀ ದೊಡ್ಡ ಸೌರ ವಿದ್ಯುತ್ ಘಟಕವನ್ನು ಅನುಷ್ಟಾನಗೊಳಿಸಿದೆ. ಆರ್ಬ್ ಎನರ್ಜಿ ಸಂಸ್ಥೆಯು ಇದಕ್ಕೆ ಸಹಕಾರ ನೀಡಿದೆ. ಇದರಿಂದ ಕ್ಯಾಂಪ್ಕೋ ಸಂಸ್ಥೆಯು ವಾರ್ಷಿಕ ರೂ. 54 ಲಕ್ಷಗಳಷ್ಟು ಉಳಿತಾಯವನ್ನು ಮಾಡಬಹುದಾಗಿದೆ. ಕ್ಯಾಂಪ್ಕೋ ಈ ಯೋಜನೆಗಾಗಿ ರೂ. 1.85 ಕೋಟಿ ಹೂಡಿಕೆ ಮಾಡಿದ್ದು ಮುಂದಿನ 4 ವರ್ಷಗಳೊಳಗಾಗಿ ಹೂಡಿಕೆ ಮಾಡಿರುವ ಮೊತ್ತ ಮರಳಲಿದೆ. ಬಳಿಕ ಕ್ಯಾಂಪ್ಕೋ ಸಂಸ್ಥೆಗೆ ವಿದ್ಯುತ್ ಉಚಿತವಾಗಿಯೇ ಲಭಿಸಲಿದೆ ಎಂದು ತಿಳಿಸಿದರು.
ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಉಪಾಧ್ಯಕ್ಷ ಶಂಕರ ನಾರಾಯಣ ಖಂಡಿಗೆ, ಪುತ್ತೂರು ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿಲ್ಪಾ ಶೆಟ್ಟಿ, ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು. ಕ್ಯಾಂಪ್ಕೋ ಸಂಸ್ಥೆಯ ಆಡಳಿತ ನಿರ್ದೇಶಕ ಎಚ್.ಎಂ. ಕೃಷ್ಣ ಕುಮಾರ್ ಸ್ವಾಗತಿಸಿ, ಅನಿತಾ ಜೆ. ವಂದಿಸಿದರು. ರಾಧೇಶ್ ಕಾರ್ಯಕ್ರಮ ನಿರ್ವಹಿಸಿದರು.