ಮೂಡುಬಿದಿರೆ: ಹತ್ರಸ್ ಪ್ರಕರಣ ಖಂಡಿಸಿ ಮುಸ್ಲಿಂ ಯೂತ್ ಲೀಗ್‍ನಿಂದ ಪ್ರತಿಭಟನೆ
ಮೂಡುಬಿದಿರೆ: ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮುಸ್ಲಿಂ ಯೂತ್ ಲೀಗ್ ತೋಡಾರು ಘಟಕದಿಂದ ಶುಕ್ರವಾರ ತೋಡಾರು ಜಂಕ್ಷನ್‍ನಲ್ಲಿ ಪ್ರತಿಭಟನೆ ನಡೆಯಿತು.
ಮುಸ್ಲಿಂ ಯೂತ್ ಲೀಗ್‍ನ ಜಿಲ್ಲಾಧ್ಯಕ್ಷ ಅಫಾಮ್ ಅಲಿ ತಂಗಳ್ ಪ್ರತಿಭಟನೆಗೆ ಚಾಲನೆ ನೀಡಿದರು.
ಮುಸ್ಲಿಂ ಲೀಗ್‍ನ ಜಿಲ್ಲಾಧ್ಯಕ್ಷ ತಬೂಕ್ ಅಬ್ದುಲ್ ರಹಿಮಾನ್ ದಾರಿಮಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಅತ್ಯಾಚಾರ ಸಹಿತ ಹೀನ ಕೃತ್ಯಗಳು ಉತ್ತರ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು, ಅಮಾನುಷವಾಗಿ ಅತ್ಯಾಚಾರವೆಸಗಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಈ ಪ್ರಕರಣ ದಿಂದ ದೇಶದಲ್ಲಿ ಮಹಿಳೆಯರು ಸ್ವತಂತ್ರರಾಗಿ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ರಸ್ ನಲ್ಲಿ ನಡೆದ ಪ್ರಕರಣವನ್ನು ಮರೆಮಾಚಲು ಯತ್ನಿಸಿದ ಅಧಿಕಾರಿಗಳ ವಿರುದ್ಧವೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಉಸ್ತುವಾರಿ ಅಬ್ದುಲ್ ಕರೀಂ ಕಡಬ, ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ಉಸ್ತುವಾರಿ ಮಹಮ್ಮದ್ ಹನೀಫ್, ತೋಡಾರು ಯೂತ್ ಮುಸ್ಲಿಂ ಲೀಗ್‍ನ ಮಹಮ್ಮದ್ ಝುಬೇರ್, ಮುಸ್ಲಿಂ ಯೂತ್ ಲೀಗ್‍ನ ಅಧ್ಯಕ್ಷ ಮುಸ್ಲಿಂ ಲೀಗ್ ಅಧ್ಯಕ್ಷ ಇದಿನಬ್ಬ ಹಾಜಿ, ಮುಖಂಡರಾದ ಹನೀಫ್ ಎಚ್‍ಎಂಟಿ, ಝುಬೇರ್ ಕಲಾಯಿ, ಸಲೀಂ ಹಂಡೇಲು, ಇಂತಿಯಾಜ್, ಇಮ್ತಿಯಾಝ್,ಅನೀಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.