ಉಡುಪಿ: ರವಿವಾರ 170 ಮಂದಿಯಲ್ಲಿ ಕೊರೋನ ದೃಢ, ಮಹಿಳೆ ಬಲಿ
ಉಡುಪಿ, ಅ.11: ಜಿಲ್ಲೆಯಲ್ಲಿ ರವಿವಾರ ಹೊಸದಾಗಿ ಇನ್ನೂ 170 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಅಲ್ಲದೆ ದಿನದಲ್ಲಿ 74 ವರ್ಷ ಪ್ರಾಯದ ಓರ್ವ ಹಿರಿಯ ಮಹಿಳೆ ಕೊರೋನಕ್ಕೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ ಮಕ್ಕಳು ಸೇರಿದಂತೆ 93 ಮಂದಿ ಪುರುಷರು ಹಾಗೂ 77 ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ 25 ಪುರುಷರು ಹಾಗೂ 36 ಮಂದಿ ಮಹಿಳೆಯರಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 86, ಕುಂದಾಪುರ ತಾಲೂಕಿನ 53 ಹಾಗೂ ಕಾರ್ಕಳ ತಾಲೂಕಿನ 29 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಉಳಿದ ಇಬ್ಬರು ಹೊರಜಿಲ್ಲೆಯಿಂದ ಚಿಕಿತ್ಸೆಗೆ ಬಂದು ಇಲ್ಲಿ ಪಾಸಿಟಿವ್ ಬಂದವರು ಎಂದು ಡಾ.ಸೂಡ ವಿವರಿಸಿದರು.
135 ಮಂದಿ ಗುಣಮುಖ: ದಿನದಲ್ಲಿ 135 ಮಂದಿ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಹೀಗೆ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ 17,276ಕ್ಕೇರಿದೆ. ಜಿಲ್ಲೆಯಲ್ಲಿ ಸದ್ಯ 1965 ಸಕ್ರೀಯ ಕೋವಿಡ್ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದವರು ತಿಳಿಸಿದರು.
1793 ನೆಗೆಟಿವ್: ಜಿಲ್ಲೆಯಲ್ಲಿ ರವಿವಾರ ಒಟ್ಟು 1998 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 1793 ಮಂದಿ ನೆಗೆಟಿವ್ ಬಂದಿದ್ದು, 205 ಮಂದಿ ಪಾಸಿಟಿವ್ ಬಂದಿದ್ದಾರೆ. ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 19,441 ಆಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,44,864 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1,25,423 ಮಂದಿ ನೆಗೆಟಿವ್ ಬಂದಿದ್ದಾರೆ. 19441 ಮಂದಿ ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ 17,276 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 165 ಮಂದಿ ಮೃತಪಟ್ಟಿದ್ದಾರೆ.
ಇಂದು ಒಬ್ಬರು ಬಲಿ: ರವಿವಾರವೂ ಜಿಲ್ಲೆಯಲ್ಲಿ ಒಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ನ್ಯುಮೋನಿಯಾ, ಕಿಡ್ನಿ ಸಮಸ್ಯೆಗಳಿಂದ ಬಳಲುತಿದ್ದ ಉಡುಪಿ ತಾಲೂಕಿನ 74 ವರ್ಷ ಪ್ರಾಯದ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ವೇಳೆ ಕೋವಿಡ್‌ಗೆ ಪಾಸಿಟಿವ್ ಕಂಡುಬಂದು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.