ಪಡುಬಿದ್ರೆ ಬೀಚ್‌ಗೆ ಬ್ಲೂಫ್ಲ್ಯಾಗ್ ಅಂತಾರಾಷ್ಟ್ರೀಯ ಮಾನ್ಯತೆ: ಡೆನ್ಮಾಕ್ ಸಂಸ್ಥೆಯಿಂದ ಅಧಿಕೃತ ಘೋಷಣೆ
ಉಡುಪಿ, ಅ.11: ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಪಡುಬಿದ್ರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡ್ ಸಹಿತ ಭಾರತದ ಎಂಟು ಕಡಲ ತೀರಗಳಿಗೆ ಅಧಿಕೃತವಾಗಿ ಬ್ಲೂಫ್ಲ್ಯಾಗ್ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆ.
ಬೀಚ್‌ನಲ್ಲಿನ ಪರಿಸರ ಶಿಕ್ಷಣ, ನಿರ್ವಹಣೆ, ಸುರಕ್ಷತೆ, ಸ್ವಚ್ಛತೆಯ ಮಾನ ದಂಡದ ಆಧಾರದಲ್ಲಿ ಕೇಂದ್ರದ ನಿರ್ಣಾಯಕ ಮಂಡಳಿ, ಪರಿಸರ ತಜ್ಞರು, ವಿಜ್ಞಾನಿಗಳನ್ನೊಳಗೊಂಡ ರಾಷ್ಟ್ರೀಯ ಸ್ವತಂತ್ರ ತಂಡವು ಈ ಮಾನ್ಯತೆಗಾಗಿ ಅಂತರಾಷ್ಟ್ರೀಯ ನಿರ್ಣಾಯಕ ಮಂಡಳಿಗೆ ಶಿಫಾರಸ್ಸು ಮಾಡಿತ್ತು. ಇದನ್ನು ಪರಿಶೀಲಿಸಿದ ಡೆನ್ಮಾರ್ಕ್‌ನ ಫೌಂಡೇಶನ್ ಫಾರ್ ಎನ್ವೆಯರ್‌ಮೆಂಟ್ ಎಜುಕೇಶನ್ ಸಂಸ್ಥೆ ಈ ಮಾನ್ಯತೆಯನ್ನು ಘೋಷಿಸಿದೆ.
ಪಡುಬಿದ್ರೆ ಕಾಮಿನಿ ನದಿ ಸಮುದ್ರ ಸೇರುವ ಒಂದು ಕಿ.ಮೀ. ಉದ್ದದ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್‌ನ ಸುಮಾರು 600 ಮೀಟರ್ ವ್ಯಾಪ್ತಿ ಪ್ರದೇಶವನ್ನು ಬ್ಲೂಫ್ಲ್ಯಾಗ್ ಬೀಚ್ ಆಗಿ ಅಂತರಾಷ್ಟ್ರೀಯ ಮಾನ್ಯತೆ ಲಭಿಸಿದೆ. ಇದೀಗ ಈ ಬೀಚ್‌ಗೆ ಸ್ವಚ್ಛ ಮತ್ತು ಪ್ರವಾಸಿ ಕಡಲ ತೀರ ಎಂಬ ಅಂತಾರಾಷ್ಟ್ರೀಯ ಮಟ್ಟದ ಬ್ಲೂಫ್ಲ್ಯಾಗ್ ಪ್ರಮಾಣ ಪತ್ರವನ್ನು ಡೆನ್ಮಾರ್ಕ್ ಸಂಸ್ಥೆ ನೀಡಿದೆ. 65 ವಿವಿಧ ಸಂಘಟನೆಗಳನ್ನು ಒಳಗೊಂಡ ಈ ಸಂಸ್ಥೆಯು ವಿಶ್ವದ 60 ರಾಷ್ಟ್ರಗಳ ಸದಸ್ಯತ್ವ ಹೊಂದಿದೆ.
ರಾಜ್ಯದ ಎರಡು ಬೀಚ್‌ಗಳೊಂದಿಗೆ ಗುಜರಾತ್‌ನ ಶಿವರಾಜಪುರ, ದಿಯು ಮತ್ತು ದಾಮನ್‌ನ ಘೋಗ್ಲಾ, ಕೇರಳದ ಕಪ್ಪದ್, ಆಂಧ್ರಪ್ರದೇಶದ ರುಶಿಕೊಂಡ, ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ಮತ್ತು ನಿಕೋಬಾರ್‌ನ ರಾಧಾ ನಗರ್ ಬೀಚ್‌ಗಳಿಗೂ ರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ ಎಂದು ಭಾರತದ ಬ್ಲೂಫ್ಲ್ಯಾಗ್ ಬೀಚ್‌ಗಳ ಮಿಶನ್ ಲೀಡರ್ ಸಂಜಯ್ ಜಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
ಸ್ವಚ್ಛ ಹಾಗೂ ಉತ್ತಮ ಪರಿಸರ ಮತ್ತು ನೀರಿನ ಗುಣಮಟ್ಟ ಹೊಂದಿರುವ ಕಡಲ ತೀರಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಅದರಂತೆ ಕೇಂದ್ರ ಪರಿಸರ ಮಂತ್ರಾಲಯವು ರಾಜ್ಯದಲ್ಲಿ ಕಾರವಾರದ ಕಾಸರ್‌ಕೋಡ್ ಹಾಗೂ ಪಡುಬಿದ್ರಿ ಬೀಚ್‌ಗೆ ಬ್ಲೂಫ್ಲ್ಯಾಗ್ ಬೀಚ್ ಎಂದು ಪರಿಗಣಿಸಲು ಕಳೆದ ವರ್ಷ ಅನುಮೋದನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಗುರ್‌ಗಾಂವ್‌ನ ಎ ಟು ಝಡ್ ಇನ್‌ಫ್ರಾ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ಬೀಚ್‌ನಲ್ಲಿ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿತ್ತು. ಈ ಯೋಜನೆಗೆ ಕೇಂದ್ರ ಸರಕಾರ 8 ಕೋಟಿ ರೂ. ಹಾಗೂ ರಾಜ್ಯ ಸರಕಾರ ವಿವಿಧ ಮೂಲ ಸೌಕರ್ಯಗಳ ಅಭಿವೃದ್ಧಿಗೆ 2.5 ಕೋಟಿ ರೂ. ಅನುದಾನವನ್ನು ಒದಗಿಸಿತ್ತು.
ಪಡುಬಿದ್ರೆ ಬೀಚ್‌ನಲ್ಲಿ ಸೌರಶಕ್ತಿಯನ್ನು ಬಳಕೆ ಮಾಡಲಾಗುತ್ತಿದ್ದು, ಇಲ್ಲಿಗೆ ಬೇಕಾದ ವಿದ್ಯುತ್‌ನ್ನು ಇಲ್ಲಿಯೇ ಉತ್ಪಾದಿಸಲಾಗುತ್ತಿದೆ. ಇಲ್ಲಿಗೆ ಸುಮಾರು 35 ಕೆವಿ ವಿದ್ಯುತ್ ಅಗತ್ಯತೆ ಇದ್ದು, ಸದ್ಯ 40 ಕೆವಿ ಸೌರಶಕ್ತಿಯ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಬೀಚ್‌ನ ಎಲ್ಲ ಕಡೆಗಳ ಲ್ಲಿಯೂ ಎಲ್ ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ.
ಜೈವಿಕ ಶೌಚಾಲಯಗಳು, ಮಕ್ಕಳ ಆಟಿಕೆ ಸಾಮಗ್ರಿ, ಜೋಕಾಲಿ, ಪ್ರಥಮ ಚಿಕಿತ್ಸಾ ಕೊಠಡಿ, ಬಟ್ಟೆ ಬದಲಾವಣೆ ಹಾಗೂ ಸ್ನಾನದ ಕೊಠಡಿಗಳು, ಫಲಕಗಳು, ಹಸಿರುವ ಹುಲ್ಲು ಹಾಸು, ಜಾಗಿಂಗ್ ಟ್ರ್ಯಾಕ್ ಮತ್ತು ಮಕ್ಕಳ ಮನೊರಂಜನಾ ಚಟುವಟಿಕೆಗಳು, ಘನತ್ಯಾಜ್ಯ ನಿರ್ವಹಣೆ ಮತ್ತು ಮರು ಬಳಕೆಯ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದೆ. ಸಿಸಿಟಿವಿ, ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕೆ ವಾಹನ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
''ಪಡುಬಿದ್ರೆ ಬೀಚ್‌ಗೆ ಅಂತರಾಷ್ಟ್ರೀಯ ಮಾನ್ಯತೆ ದೊರಕಿರುವುದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ದೊರೆತಂತಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಬೀಚ್‌ಗಳನ್ನು ಇದೇ ರೀತಿ ಅಭಿವೃದ್ಧಿ ಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ಸಮೀಪ ಇರುವ ದ್ವೀಪವನ್ನು 5.4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಪೆಡಲ್ ಬೋಟಿಂಗ್ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗುವುದು''.
-ಚಂದ್ರಶೇಖರ್ ನಾಯಕ್, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಉಡುಪಿ ಜಿಲ್ಲೆ.
''ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಮುತವರ್ಜಿಯಿಂದ ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಎಲ್ಲಾ ಕಾಮಗಾರಿಗಳು ಪೂರ್ಣ ಗೊಂಡಿವೆ. ಶುದ್ಧ ಕುಡಿಯುವ ನೀರಿನ ಘಟಕ, ಆಸನಗಳ ಅಳವಡಿಕೆ, ಅಂಗವಿಕಲರಿಗೆ ಗಾಲಿ ಕುರ್ಚಿ, ಛತ್ರಿಗಳೊಂದಿಗೆ ಲ್ಯಾಂಜರ್ ಕುರ್ಚಿಗಳ ಕೆಲಸ ಬಾಕಿ ಇದೆ. ಮುಂದಿನ ವಾರಗಳಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ. ಈಗಾಗಲೇ ಪ್ರತಿ ನಿತ್ಯ 400-500 ಮಂದಿ ಪ್ರವಾಸಿಗರು ಬೀಚ್‌ಗೆ ಆಗಮಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ ಹೆಚ್ಚಾಗಿರುತ್ತದೆ.
-ವಿಜಯ ಶೆಟ್ಟಿ, ಪಡುಬಿದ್ರೆ ಬ್ಲೂಫ್ಯಾಗ್ ಬೀಚ್ ಕಾಮಗಾರಿಯ ಉಸ್ತುವಾರಿ