ಸೇವಾ ಸಂಸ್ಥೆಗಳು ಮತಾಂತರ ಕೇಂದ್ರಗಳಾಗಿ ಪರಿವರ್ತನೆ: ಶೋಭಾ ಕರಂದ್ಲಾಜೆ ಆರೋಪ
ಉಡುಪಿ, ಅ. 11: ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಹಲವು ಸಂಸ್ಥೆಗಳು ಈಗ ಮತಾಂತರ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿದೆ. ಹೀಗೆ ಕೆಲವು ಸಂಸ್ಥೆಗಳು ದೇವರ ಹೆಸರಿನಲ್ಲಿ ಮತಾಂತರ ಮಾಡುವಂತಹ ಹೇಯ್ಯ ಕೃತ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಮಕ್ಕಳ ಸಹಾಯವಾಣಿ 1098, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಉಡುಪಿ ಇವುಗಳ ಆಶ್ರಯದಲ್ಲಿ ರವಿವಾರ ಕುಕ್ಕಿಕಟ್ಟೆಯಲ್ಲಿ ಸುಬ್ರಹ್ಮಣ ದೇವಳದ ಸಭಾಭವನದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ದೇಶದಲ್ಲಿ ನೂರಾರು ಕಾನೂನುಗಳು ಜಾರಿಯಲ್ಲಿವೆ. ಆದರೆ ಈ ಕಾನೂನುಗಳಿಂದ ಇತ್ತೀಚೆಗೆ ನಡೆದ ಹತ್ರಾಸ್‌ನ ಘಟನೆಯವರೆಗೂ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಲು ಸಾಧ್ಯವಾಗಿಲ್ಲ ಎಂದರು.
ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕೇವಲ ಕಾನೂನಿನ ಮೂಲಕ ತಡೆಯಲು ಸಾಧ್ಯವಿಲ್ಲ. ಹೆಣ್ಣುಮಕ್ಕಳ ದಿನಾಚರಣೆ ಆಚರಿಸುವ ಈ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಹೇಗೆ ತಡೆಯ ಬಹುದು ಎಂಬುದರ ಬಗ್ಗೆ ಪ್ರಮಾಣಿಕವಾಗಿ ಚಿಂತನೆ ಮಾಡ ಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಕಾವೇರಿ, ಉಡುಪಿ ರೋಟರಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀ ನಾರಾಯಣ, ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ನಿರ್ದೇಶ ಬಿ.ಕೆ. ನಾರಾಯಣ ಉಪಸ್ಥಿತರಿದ್ದರು.
ಮಕ್ಕಳ ಸಹಾಯವಾಣಿಯ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ದೀಪಾ ಭಂಡಾರಿ ವಂದಿಸಿದರು. ಸಹಾಯವಾಣಿ ಆಪ್ತ ಸಮಾಲೋಚಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು.