ವಿಟ್ಲದಲ್ಲಿ ಮಹಿಳೆಗೆ ಹಲ್ಲೆ, ದರೋಡೆ ಪ್ರಕರಣ : ಉತ್ತರ ಪ್ರದೇಶ ಮೂಲದ ಆರೋಪಿ ಸೆರೆ
ಬಂಟ್ವಾಳ, ಅ.11: ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ಎಂಬಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ, ಹಲ್ಲೆಗೈದು ದರೋಡೆ ನಡೆಸಿದ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದೆ.
ಉತ್ತರ ಪ್ರದೇಶ ಸಹರನಪುರ ಜಿಲ್ಲೆ ನಿವಾಸಿ ಜುಬೈರ್ ಅಹಮ್ಮದ್ (24) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಕಳೆದ ಮೂರು ವರ್ಷಗಳಿಂದ ಮೇಗಿನಪೇಟೆಯ ಮರದ ಪೀಠೋಪಕರಣ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಮೂರು ದಿನಗಳಿಂದ ಮನೆ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಬಗ್ಗೆ ಮಹಿಳೆ ನೀಡಿದ ಮಾಹಿತಿ ಹಾಗೂ ಇತರ ಮಾಹಿತಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ ಕೃತ್ಯದ ಸಮಯ ಬಳಸಿದ ವಸ್ತುಗಳನ್ನು ಹಾಗೂ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರ್ಮಿಕನಾಗಿ ವಿಟ್ಲಕ್ಕೆ ಬಂದ ಈತ ಕೊರೋನ ಲಾಕ್ ಡೌನ್ ಹಿನ್ನಲೆಯಲ್ಲಿ ಹಣಕ್ಕಾಗಿ ಮೂರು ದಿನಗಳಿಂದ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಎಂದು ತನಿಖೆಯ ವೇಳೆ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಡಾ.ಲಕ್ಷ್ಮೀ ಪ್ರಸಾದ್, ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಠಾಣೆ ಉಪನಿರೀಕ್ಷಕ ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿಗಳಾದ ಪ್ರಸನ್ನ, ದಿನೇಶ್, ಜಯಕುಮಾರ್, ಪ್ರತಾಪ, ವಿನಾಯಕ, ಹೇಮರಾಜ್ ಅವರ ತಂಡ ಕಾರ್ಯಚರಣೆಯಲ್ಲಿ ಭಾಗವಹಿಸಿದೆ.