ದಿಲ್ಲಿ ಹಿಂಸಾಚಾರದ ‘ನ್ಯಾಯಯುತ ತನಿಖೆಗೆ’ ಮಾಜಿ ನಾಗರಿಕ ಸೇವಾ ಅಧಿಕಾರಿಗಳಿಂದ ಸಮಿತಿ ರಚನೆ

Update: 2020-10-11 15:33 GMT

ಹೊಸದಿಲ್ಲಿ,ಅ.11: ಈ ವರ್ಷದ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಭೀಕರ ಹಿಂಸಾಚಾರದ ಕುರಿತಾಗಿ ‘ನಾಗರಿಕ ಸಮಿತಿ’ಯೊಂದನ್ನು ರಚಿಸುವುದಾಗಿ ಅಖಿಲ ಭಾರತ ಹಾಗೂ ಕೇಂದ್ರೀಯ ಸೇವೆಗಳಿಗೆ ಸೇರಿದ ಮಾಜಿ ಉದ್ಯೋಗಿಗಳ ಒಕ್ಕೂಟವಾದ ‘ಸಾಂವಿಧಾನಿಕ ನಡವಳಿಕೆ ಸಂಘಟನೆ’ಯು ರವಿವಾರ ಘೋಷಿಸಿದೆ. ‘‘2020ರ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಗಳ ಭೀಭತ್ಸತೆ, ಹಿಂಸೆಯ ತೀವ್ರತೆ, ಆಗಿರುವ ಪ್ರಾಣಹಾನಿ ಹಾಗೂ ಗಲಭೆಗಳಿಂದಾಗಿ ಸಮುದಾಯಗಳ ನಡುವೆ ಉಂಟಾದ ಕೋಮುವಿಭಜನೆಯನ್ನು ಪರಿಗಣನೆಗೆ ತೆಗೆದುಕೊಂಡಾಗ, ಗಲಭೆಯ ಸಂದರ್ಭದಲ್ಲಿ ಹಾಗೂ ಆನಂತರ ಆಗಿರುವಂತಹ ಬದಲಾವಣೆಗಳ ಬಗ್ಗೆ ಕೂಲಂಕಶ ಪರಿಶೀಲನೆಯನ್ನು ನಡೆಸಲು ತಜ್ಞರ ಸಮಿತಿ ನಡೆಸಬೇಕೆಂದು ನಾವು ಭಾವಿಸಿದ್ದೇವೆ’’ ಎಂದು ಸಾಂವಿಧಾನಿಕ ನಡವಳಿಕೆ ಸಂಘಟನೆಯು ಹೇಳಿಕೆಯಲ್ಲಿ ತಿಳಿಸಿದೆ.

 ಗಲಭೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ನಡೆಸಿದ ತನಿಖೆಯು ಇತ್ತೀಚಿನ ದಿನಗಳಲ್ಲಿ ಟೀಕಾತ್ಮಕವಾಗಿ ವಿಮರ್ಶೆಗೊಳಗಾಗಿರುವುದರಿಂದ ಇಂತಹ ಸಂಘಟನೆಯ ರಚನೆ ಹೆಚ್ಚು ಅತ್ಯಗತ್ಯವಾಗಿದೆಯೆಂದು ಅದು ಹೇಳಿದೆ.

 ದಿಲ್ಲಿ ಗಲಭೆಯನ್ನು ನಿಭಾಯಿಸಲು ಆಡಳಿತ ಯಂತ್ರವು ತೋರಿದ ಪ್ರತಿಕ್ರಿಯೆ ಸೇರಿದಂತೆ ಗಲಭೆಗೆ ಹಾಗೂ ಅದಕ್ಕೆ ಕಾರಣವಾದ ಘಟನಾವಳಿಗಳ ಬಗ್ಗೆ ಸಮಿತಿಯು ತನಿಖೆ ನಡೆಸಲಿದೆ ಎಂದು ಸಂಘಟನೆ ತಿಳಿಸಿದೆ. ಗಲಭೆಯ ವೇಳೆ ಮತ್ತು ಗಲಭೆಗೆ ಮುನ್ನ ಮತ್ತು ಆನಂತರ ನೈಜ ಅಥವಾ ನಕಲಿ ಸುದ್ದಿಗಳನ್ನು ಹರಡುವಲ್ಲಿ ಮುಖ್ಯವಾಹಿನಿಯ ಹಾಗೂ ಸಾಮಾಜಿಕ ಜಾಲತಾಣಗಳ ಪಾತ್ರದ ಬಗ್ಗೆಯೂ ಅದು ಪರಿಶೀಲನೆಯನ್ನು ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News